ಕಳೆದ ಒಂದೆರಡು ದಿನಗಳ ಹಿಂದೆ ನಟ ಅಕ್ಕಿನೇನಿ ನಾಗಾರ್ಜುನ್ ವಿರುದ್ಧ ನೆಟ್ಟಿಗರು ಕಿಡಿ ಕಾರಿದ್ದರು. ವಿಮಾನ ನಿಲ್ದಾಣದಿಂದ ನಾಗಾರ್ಜುನ್ ಹೊರ ಬರುತ್ತಿದ್ದಂತೆ ಅವರ ಅಭಿಮಾನಿಯೋರ್ವ ಫೋಟೋ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಇದರಿಂದ ನಾಗಾರ್ಜುನ್ ಬಾಡಿಗಾರ್ಡ್ ಆತನನ್ನು ದೂರ ತಳ್ಳಿದ್ದರು. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಅದಾದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಕ್ಷಮೆ ಕೇಳಿದ್ದ ನಟ ಇದೀಗ ಆ ವ್ಯಕ್ತಿಯನ್ನು ಭೇಟಿಯಾಗಿದ್ದಾರೆ.
ಅಭಿಮಾನಿಯನ್ನು ಬಾಡಿಗಾರ್ಡ್ ತಳ್ಳಿ ಬೀಳಿಸಿದಾಗ ಅದು ನಾಗಾರ್ಜುನ ಅವರ ಗಮನಕ್ಕೆ ಬಂದಿರಲಿಲ್ಲ. ವಿಡಿಯೋ ವೈರಲ್ ಆದ ನಂತರ ಅವರಿಗೆ ಆ ಬಗ್ಗೆ ತಿಳಿಯಿತು. ಈಗ ಮತ್ತೆ ಅವರು ಮುಂಬೈ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ಅಂದು ಕೆಳಗೆ ಬಿದ್ದ ಅಭಿಮಾನಿಯನ್ನು ನಾಗಾರ್ಜುನ ಮಾತನಾಡಿಸಿ, ಆ ವ್ಯಕ್ತಿಯನ್ನು ತಬ್ಬಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ.
ಇಷ್ಟೆಲ್ಲ ಟೀಕೆ ಎದುರಾಗಿದ್ದಕ್ಕೆ ಆ ಅಭಿಮಾನಿಯು ನಾಗಾರ್ಜುನ ಬಳಿ ಕ್ಷಮೆ ಕೇಳಿದ್ದಾರೆ. ಆದರೆ ‘ಇದರಲ್ಲಿ ನಿಮ್ಮ ತಪ್ಪು ಏನೂ ಇಲ್ಲ’ ಎಂದು ನಾಗಾರ್ಜುನ ಅವರು ಸಮಾಧಾನ ಮಾಡಿದ್ದಾರೆ. ಅಲ್ಲದೇ ಅಭಿಮಾನಿಯ ಜೊತೆ ಅವರು ಕೆಲ ಕಾಲ ಮಾತುಕಥೆ ನಡೆಸಿದ್ದಾರೆ. ಈ ವಿಡಿಯೋ ಕೂಡ ವೈರಲ್ ಆಗಿದೆ. ಇದಕ್ಕೆ ಜನರಿಂದ ಸಖತ್ ಮೆಚ್ಚುಗೆ ವ್ಯಕ್ತವಾಗಿದೆ.
ಅಂದು ಘಟನೆ ನಡೆದ ಬಳಿಕ ನಾಗಾರ್ಜುನ ಟ್ವೀಟ್ ಮಾಡಿದ್ದರು. ‘ಈಗತಾನೇ ಇದು ನನ್ನ ಗಮನಕ್ಕೆ ಬಂದಿದೆ. ಹೀಗೆ ಆಗಬಾರದಿತ್ತು. ಆ ವ್ಯಕ್ತಿಯ ಬಳಿ ನಾನು ಕ್ಷಮೆ ಕೇಳುವೆ. ಮುಂದಿನ ದಿನಗಳಲ್ಲಿ ಎಚ್ಚರಿಕೆ ವಹಿಸುತ್ತೇನೆ. ಇನ್ನೆಂದೂ ಈ ರೀತಿ ಆಗುವುದಿಲ್ಲ’ ಎಂದು ನಾಗಾರ್ಜುನ ಭರವಸೆ ನೀಡಿದ್ದರು. ಆ ಮಾತಿಗೆ ತಕ್ಕಂತೆಯೇ ಅಭಿಮಾನಿಯನ್ನು ಭೇಟಿಯಾಗುವ ಮೂಲಕ ಮೆಚ್ಚುಗೆ ಪಡೆದುಕೊಂಡಿದ್ದಾರೆ.