ರಾಮನಗರ: ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿರುವ ರಾಜ್ಯದ ಸಾಕಷ್ಟು ಸರಕಾರಿ ಶಾಲೆಗಳು ವಿಧಾನಸಭೆ ಚುನಾವಣೆ ಮತದಾನಕ್ಕಾಗಿ ಬಾಗಿಲುತೆಗೆಯುತ್ತಿವೆ. ಚುನಾವಣಾ ಆಯೋಗದ ಪ್ರಕಾರ ಮತದಾನ ಕೇಂದ್ರವನ್ನು ಸರಕಾರಿ ಶಾಲೆಗಳಲ್ಲೇ ಮಾಡಬೇಕೆಂಬ ನಿಯಮವಿದೆ. ಆದರೆ ರಾಜ್ಯದ ಸಾಕಷ್ಟು ಸರಕಾರಿ ಶಾಲೆಗಳಿಗೆ ಸಂಪೂರ್ಣ ಬೀಗ ಹಾಕಿರುವುದರಿಂದ ಈಗ ಬಾಗಿಲು ಮುಚ್ಚಿರುವ ಶಾಲೆಗಳನ್ನು ಗುರುತಿಸಿ ರಾಜ್ಯದ ಜಿಲ್ಲಾ ಹಂತದ ಚುನಾವಣಾಧಿಕಾರಿಗಳು ಬೀಗ ತೆರೆಸಿ ಸ್ವಚ್ಛತೆ ಕಾಪಾಡುವ ಜತೆಗೆ, ಮೂಲಸೌಕರ್ಯ ಒದಗಿಸಲಾಗುತ್ತಿದೆ.
2380 ಶಾಲೆಗಳು ಮುಚ್ಚಿವೆ
ಚುನಾವಣಾ ಆಯೋಗ ಗುರುತಿಸಿರುವ ರಾಜ್ಯದ 52282 ಮತಗಟ್ಟೆಗಳ ಪೈಕಿ ಎಲ್ಲಾ ಮತಗಟ್ಟೆಗಳು ಬಹುತೇಕ ಸರಕಾರಿ ಶಾಲೆಗಳಲ್ಲೇ ಇವೆ. ಆದರೆ ಕಳೆದ 5 ವರ್ಷಗಳಿಂದ ರಾಜ್ಯದಲ್ಲಿ 2380 ಪ್ರಾಥಮಿಕ, ಹಿರಿಯ ಮತ್ತು ಪ್ರೌಢಶಾಲೆಗಳನ್ನು ಮುಚ್ಚಲಾಗಿದ್ದು. ಚುನಾವಣಾ ಆಯೋಗ ಮತಗಟ್ಟೆಗಳಾಗಿಸಿದ್ದ ಮುಚ್ಚಿರುವ ಶಾಲೆಗಳನ್ನು ಕಂದಾಯ ಇಲಾಖೆ ಅಧಿಕಾರಿಗಳ ನೆರವಿನಿಂದ ಗುರುತಿಸಿ, ಆ ಶಾಲೆಗಳ ಬಾಗಿಲು ತೆಗೆಸಿ ಮೂಲಸೌಕರ್ಯ ಒದಗಿಸಲಾಗುತ್ತಿದೆ.
ಆಯೋಗದ ನಿಯಮದ ಪ್ರಕಾರ 750 ರಿಂದ 1250ಕ್ಕೂ ಹೆಚ್ಚು ಮತದಾರರಿರುವ ಕಡೆ ಸರಕಾರಿ ಶಾಲೆಗಳನ್ನು ಗುರುತಿಸಿ ಮತಗಟ್ಟೆಗಳನ್ನು ಮಾಡಲಾಗಿದೆ. ಆದರೆ ಹೆಚ್ಚು ಮತದಾರರಿರುವ ಕಡೆ ಬಾಗಿಲು ಮುಚ್ಚಿರುವ ಶಾಲೆಗಳ ಮತಗಟ್ಟೆ ಸ್ಥಳಾಂತರಕ್ಕೆ ಚುನಾವಣಾ ನಿಯಮ ಅಡ್ಡಿಬರುವುದರಿಂದ ನಿಯಮದಂತೆ ಸರಕಾರಿ ಶಾಲೆಗಳೇ ಮತಗಟ್ಟೆಗಳಾಗಿ ಕಾರ್ಯನಿರ್ವಹಿಸಬೇಕಿದೆ.
ಒಂದು ಶಾಲೆ ಮುಚ್ಚುವುದರಿಂದ ಎಷ್ಟೆಲ್ಲಾ ತೊಂದರೆಗಳಿವೆ ಎಂಬುದು ಚುನಾವಣೆ ವೇಳೆ ಬೆಳಕಿಗೆ ಬರುತ್ತಿದೆ. ಮತಗಟ್ಟೆ ವೇಳೆ ಕನ್ನಡ ಶಾಲೆಗಳಿಗೆ ಬೆಲೆ ಬಂದಿದೆ. ಮುಂದೆ ನಮ್ಮನ್ನಾಳುವ ಸರಕಾರಗಳು ಇತಿಹಾಸವಿರುವ ಕನ್ನಡ ಶಾಲೆಗಳನ್ನು ಉಳಿಸಿದರೆ ಸಮಸ್ಯೆಯಾಗದು. 2022-23 ನೇ ಸಾಲಿನಲ್ಲೂ ರಾಜ್ಯದ 150 ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚಲು ಸರಕಾರ ಮುಂದಾಗಿತ್ತು ಎಂದು ಶಿಕ್ಷಣ ತಜ್ಞ ಡಾ. ನಿರಂಜನಾರಾಧ್ಯ, ಮಾಹಿತಿ ಹಂಚಿಕೊಂಡಿದ್ದಾರೆ.
ಆಂಗ್ಲ ಶಾಲೆಗಳ ಹಾವಳಿಯಿಂದ ನಮ್ಮೂರ ಶಾಲೆ ಮುಚ್ಚಿ 4 ವರ್ಷವಾಯಿತು. ಗ್ರಾಮ ಪಂಚಾಯಿತಿ ಚುನಾವಣೆಗೆ ಬಾಗಿಲು ತೆರೆದಿತ್ತು. ಇದೀಗ ವಿಧಾನಸಭೆ ಚುನಾವಣೆಗೆ ಬಾಗಿಲು ತೆರೆಯುತ್ತಿದ್ದಾರೆ.