ಹುಬ್ಬಳ್ಳಿ: ಜಿಲ್ಲಾ ಸ್ವೀಪ್ ಯೋಜನೆಯಡಿ ಮತದಾನದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಏಪ್ರೀಲ್ 1 ಕ್ಕೆ 18 ವರ್ಷ ಪೂರ್ಣಗೊಂಡಿರುವ ಅರ್ಹ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಅಲ್ಲದೇ ಮತದಾನ ನಡೆಯುವ 10 ದಿನ ಮುಂಚಿತವಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರ್ಪಡೆಗೊಳಿಸಲು ಅವಕಾಶವಿರುವುದು.
ಎಲ್ಲಾ ಮತಗಟ್ಟೆಗಳಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿದೆ. 73 ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಮತಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಗೆ ಸಕಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಪ್ರಜಾಪ್ರಭುತ್ವದ ಹಬ್ಬವನ್ನು ಎಲ್ಲರೂ ಸೇರಿ ಆಚರಿಸಬೇಕು ಎಂದು 73 ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಮತಕ್ಷೇತ್ರದ ಚುನಾವಣಾಧಿಕಾರಿಯಾದ ಡಾ.ಬಿ.ಗೋಪಾಲಕೃಷ್ಣ ಹೇಳಿದರು.
ಇಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರ ಸಭಾಭವನದಲ್ಲಿ 73 ಮತಕ್ಷೇತ್ರ ವ್ಯಾಪ್ತಿ, ಚುನಾವಣಾ ಸಿದ್ಧತೆ, ಸಿಬ್ಬಂದಿಗಳ ನೇಮಕ, ಅಕ್ರಮ ತಡೆಗೆ ಕೈಗೊಂಡ ಕ್ರಮಗಳು, ಚೆಕ್ ಪೋಸ್ಟ್ ಹಾಗೂ ಇತರ ವಿಷಯಗಳ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಕ್ಷೇತ್ರದ ವ್ಯಾಪ್ತಿಯಲ್ಲಿ 2,46,120 ಮತದಾರರು ಇದ್ದು, ಅದರಲ್ಲಿ 1,22,006 ಪುರುಷರು, 1,24,076 ಮಹಿಳೆಯರು, 38 ಇತರೆ ಮತದಾರರಿದ್ದಾರೆ.
80 ವರ್ಷ ಮೇಲ್ಪಟ್ಟ 6,434 ಮತದಾರರಿದ್ದಾರೆ. ಅದರಲ್ಲಿ 3,146 ಪುರುಷರು ಹಾಗೂ 3,288 ಮಹಿಳಾ ಮತದಾರಿದ್ದಾರೆ. 80 ವರ್ಷ ಮೇಲ್ಪಟ್ಟವರು, ವಿಕಲಚೇತನರು ಹಾಗೂ ಕೋವಿಡ್ ರೋಗಿಗಳು ಮನೆಯಿಂದಲೇ ಮತ ಚಲಾಯಿಸುವ ಒಪ್ಪಿಗೆ ಪತ್ರ 12 ಡಿ ಅರ್ಜಿಯನ್ನು ನೀಡಲಾಗುವುದು. ಅಧಿಕಾರಿಗಳ ತಂಡ ಪೋಸ್ಟಲ್ ಮೂಲಕ ಗೌಪ್ಯ ಮತದಾನವನ್ನು ಮಾಡಿಸಲಿದ್ದಾರೆ. 1,468 ವಿಕಲಚೇತನ ಮತದಾರರಿದ್ದು, ಅವರಲ್ಲಿ 850 ಪುರುಷರು ಮತ್ತು 168 ಮಹಿಳಾ ಮತದಾರರು ಇರುವರು. 79 ಪುರುಷರು ಹಾಗೂ 8 ಮಹಿಳಾ ಮತದಾರರನ್ನು ಒಳಗೊಂಡಂತೆ ಒಟ್ಟು 87 ಸರ್ಕಾರಿ ಸೇವೆಯಲ್ಲಿರುವ ಮತದಾರರಿದ್ದಾರೆ. ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾದ 7810 ಮತದಾರರಿಗೆ ಅಂಚೆ ಮೂಲಕ ಗುರುತಿನ ಚೀಟಿಗಳನ್ನು ರವಾನಿಸಲಾಗಿದೆ. ಈ ಮೂಲಕ ಕ್ಷೇತ್ರದಲ್ಲಿ ಶೇ.100 ರಷ್ಟು ಮತದಾರರ ಗುರುತಿನ ಚೀಟಿಗಳನ್ನು ವಿತರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಒಟ್ಟು 254 ಮತಗಟ್ಟೆಗಳಿದ್ದು, ಅದರಲ್ಲಿ 2 ಸೂಕ್ಷö್ಮ ಹಾಗೂ 20 ಅತೀ ಸೂಕ್ಷö್ಮ ಮತಗಟ್ಟೆಳಿರುತ್ತವೆ. ವಿಕಲಚೇತನರಿಗಾಗಿ 1, ಯುವ ಮತದಾರರಿಗಾಗಿ 1, ವಿಷಯಾಧಾರಿತ ಹಾಗೂ ವಿಶೇಷವಾಗಿ ಗುರುತಿಸಲಾದ ಪ್ರದೇಶದ ಜನರಿಗಾಗಿ ತಲಾ ಒಂದೊAದು ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ.
ವಿಶೇಷವಾಗಿ ಮಹಿಳಾ ಮತದಾರರಿಗಾಗಿ 5 ಸಖಿ ಮತಗಟ್ಟೆಗಳನ್ನು ತೆರೆಯಲಾಗುವುದು. ಸಖಿ ಮತಗಟ್ಟೆಗಳಲ್ಲಿ ಮಹಿಳಾ ಸಿಬ್ಬಂದಿಗಳು ಮಾತ್ರ ಕಾರ್ಯನಿರ್ವಹಿಸುವರು. ಅಲ್ಲದೇ ಮತಗಟ್ಟೆಗಳು ಗುಲಾಬಿ ಬಣ್ಣವನ್ನು ಹೊಂದಿರುತ್ತವೆ. 1450ಕ್ಕಿಂತ ಹೆಚ್ಚು ಮತದಾರರಿರುವ ಒಟ್ಟು 6 ಮತಗಟ್ಟೆಗಳನ್ನು ಹೆಚ್ಚುವರಿಯಾಗಿ ತೆರೆಯಲು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಚುನಾವಣೆ ಅಕ್ರಮ ತಡೆಗೆ 3 ಚೆಕ್ ಪೋಸ್ಟ್ ನಿರ್ಮಾಣ
ಚುನಾವಣೆ ಅಕ್ರಮಗಳನ್ನು ತಡೆಗಟ್ಟಲು ಸುಳ್ಳ ರಸ್ತೆ, ನವಲಗುಂದ ರಸ್ತೆ ಹಾಗೂ ಗದಗ ರಸ್ತೆಯಲ್ಲಿ ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದೆ. ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದ್ದು, ವಾಹನಗಳನ್ನು ತಪಾಸಣೆ ಮಾಡುತ್ತಿವೆ.
ಚುನಾವಣೆಯನ್ನು ಶಾಂತಿಯುತವಾಗಿ ನಡೆಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅದರಂತೆ ವಿವಿಧ ತಂಡಗಳನ್ನು ರಚಿಸಲಾಗಿದೆ. ಏಫ್ಎಸ್ಟಿ ತಂಡ -3, ಸೆಕ್ಟರ್ ಅಧಿಕಾರಿಗಳ ತಂಡ-19, ವಿವಿಟಿ ತಂಡ -3, ವಿಎಸ್ಟಿ ತಂಡ-4, ಲೆಕ್ಕಪತ್ರ ತಂಡ-9, ವೆಚ್ಚ ತಂಡ-2, ಎಇಟಿ ತಂಡ-1, ಎಎಲ್ಎಂಟಿಎಸ್ ತಂಡ-5 ಹಾಗೂ ಎಮ್.ಸಿ.ಸಿ ನೋಡಲ್ ಅಧಿಕಾರಿಗಳ ಒಂದು ತಂಡವನ್ನು ರಚನೆ ಮಾಡಲಾಗಿದೆ ಎಂದು ಅವರು ಮಾಹಿತಿ ಒದಗಿಸಿದರು.
ಮತದಾರರಿಗೆ ಯಾವುದೇ ರೀತಿಯ ಸಮಸ್ಯೆಗಳು ಎದುರಾದರೂ ಸಹ ಸಹಾಯವಾಣಿ ಸಂಖ್ಯೆ 1950, 0836-2213827 ಕರೆ ಮಾಡಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಚುನಾವಣೆ ಅಕ್ರಮದ ಕುರಿತು ಮಾಹಿತಿ ನೀಡಬಹುದಾಗಿರುತ್ತದೆ. ಅಲ್ಲದೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದರ ಕುರಿತು ಸಿವಿಜಿಲ್ ಹಾಗೂ ಎನ್ವಿಎಸ್ಪಿ (ನ್ಯಾಷನಲ್ ವೋಟರ್ಸ್ ಸರ್ವೀಸ್ ಪೋರ್ಟಲ್) ಪೋರ್ಟಲ್ ಮೂಲಕ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಮತದಾನ ಹೆಚ್ಚಳಕ್ಕೆ ಕ್ರಮ
ಈ ಹಿಂದೆ ಮತದಾನ ಕಡಿಮೆಯಾದ ಪ್ರದೇಶಗಳಲ್ಲಿ ಹೆಚ್ಚಿನ ಮತದಾನಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಲ್ಲದೇ ಸ್ವೀಪ್ ಯೋಜನೆಯಡಿ ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಮತದಾನದ ಬಗ್ಗೆ ಅರಿವು ಮೂಡಿಸಲು ಗುರುತಿಸಲಾದ ಸ್ಥಳಗಳಲ್ಲಿ ಮತದಾನದ ಜಾಹೀರಾತು ಫಲಕಗಳನ್ನು ಅಳವಡಿಸಲಾಗುತ್ತಿದೆ. ಇನ್ನೂ ಎರಡು ದಿನಗಳಲ್ಲಿ ಕಸ ಸಂಗ್ರಹಣೆ ಮಾಡುವ ವಾಹನಗಳಲ್ಲಿ ಚುನಾವಣೆ ಕುರಿತ ಜಾಗೃತಿ ಧ್ವನಿ ಮುದ್ರಿಕೆಗಳನ್ನು ಪ್ರಸಾರ ಮಾಡಲಾಗುತ್ತದೆ. ಎಲ್ಲಾ ಮತಗಟ್ಟೆಗಳಲ್ಲಿ ಕುಡಿಯುವ ನೀರು, ಗಾಲಿ ಕುರ್ಚಿ, ಶೌಚಾಲಯ ಹಾಗೂ ಇತರ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.
ಮತದಾರರ ಪಟ್ಟಿ ಪರಿಷ್ಕರಣೆ
ಮತದಾರರ ಪಟ್ಟಿಯನ್ನು ವರ್ಷದಲ್ಲಿ ನಾಲ್ಕು ಬಾರಿ ಪರಿಷ್ಕರಣೆ ಮಾಡಲಾಗುತ್ತದೆ. ಮರಣ ಹೊಂದಿದವರು, ಸ್ಥಳಾಂತರಗೊAಡವರು, ನಕಲಿ ಮತದಾರರರು ಹಾಗೂ ಹೊಸ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಮತ್ತು ತೆಗೆದು ಹಾಕುವ ಕಾರ್ಯಗಳು ನಡೆಯುತ್ತವೆ. ಆ ಮೂಲಕ ಮತದಾರರ ಪಟ್ಟಿ ಕಾಲ ಕಾಲಕ್ಕೆ ಪರಿಷ್ಕರಣೆಯಾಗುತ್ತದೆ ಎಂದು ಮಾಹಿತಿ ಒದಗಿಸಿದರು.