ಬೆಂಗಳೂರು: ನಗರದ ರಾಜಭವನ ರಸ್ತೆಯಲ್ಲಿರುವ ಪ್ರಧಾನ ಅಂಚೆ ಕಚೇರಿಯಿಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ನೇತೃತ್ವದಲ್ಲಿ ಯುವ ಕಾಂಗ್ರೆಸ್ ನಾಯಕರು ಪ್ರಧಾನಿ ಕಚೇರಿಗೆ 15 ರೂಗಳನ್ನು ಅಂಚೆ ಮೂಲಕ ಕಳುಹಿಸಿಕೊಟ್ಟರು.
ಈ ಸಂದರ್ಭದಲ್ಲಿ ಎಸ್. ಮನೋಹರ್ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ 9 ವರ್ಷದ ಅಚ್ಛೇ ದಿನ್ ಸರ್ಕಾರದಲ್ಲಿ 15 ಲಕ್ಷ ಹಣ ಯಾರ ಖಾತೆಗೂ ಹಾಕಲಿಲ್ಲ, ಹಾಗೂ ಬರಲೇ ಇಲ್ಲ. ಅದಕ್ಕಾಗಿ ಸಾರ್ವಜನಿಕರ ಹಾಗೂ ಕಾಂಗ್ರೆಸ್ ಪಕ್ಷದಿಂದ ನಾವೆಲ್ಲರೂ ಸೇರಿ ಅವರಿಗೆ 15 ರೂಪಾಯಿಯನ್ನು ಮನಿ ಆರ್ಡರ್ ಮಾಡಿದ್ದು, ಕಳುಹಿಸಿ ಕೊಟ್ಟಿದ್ದೇವೆ ಎಂದು ತಿಳಿಸಿದ್ದಾರೆ. 9 ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದು ನರೇಂದ್ರ ಮೋದಿ ರವರು ರಾಷ್ಟ್ರದ ಜನತೆಗೆ ನೀಡಿದ ಎಲ್ಲ ಭರವಸೆಗಳು ಇಂದು ಸುಳ್ಳಾಗಿವೆ.
ಹೊರ ದೇಶದಲ್ಲಿರುವ ಕಪ್ಪು ಹಣ ತರಲಿಲ್ಲ. ಪ್ರತಿಯೊಬ್ಬ ಖಾತೆಗೂ 15 ಲಕ್ಷ ಹಾಕುತ್ತೇವೆ ಎಂದು ಹೇಳಿದರು. ಯಾರ ಖಾತೆಗೂ 15 ರೂ ಸಹ ಇದುವರೆಗೂ ಬಂದಿಲ್ಲ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದರು ನರೇಂದ್ರ ಮೋದಿ. ಆದರೆ. ಇರುವ ಉದ್ಯೋಗವು ಸಹ ಎಲ್ಲರಿಂದ ಕಸಿಯುತ್ತಿದ್ದಾರೆ. ಉದ್ಯೋಗ ಕೇಳಿದರೆ ಪಕೋಡ ಮಾರಾಟ ಮಾಡು ಎಂದರು ಎಂದು ಆರೋಪಿಸಿದರು.