ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದ ಬಳಿಕ ಮಾಜಿ ಪ್ರಧಾನಿ ಶೇಖ್ ಹಸೀನಾ ದೇಶದಿಂದ ಪಲಾಯನಗೊಂಡಿದ್ದರು. ಇದೀಗ ಹಸೀನ ವಿರುದ್ಧ ಸಾಮೂಹಿಕ ಹತ್ಯೆ ಆರೋಪ ಕೇಳಿ ಬಂದಿದ್ದು ಅವರ ಬಂಧನಕ್ಕೆ ದೇಶದ ಅಂತರರಾಷ್ಟ್ರೀಯ ಅಪರಾಧ ಪ್ರಕರಣಗಳ ನ್ಯಾಯಮಂಡಳಿಯು ಆದೇಶ ಹೊರಡಿಸಿದೆ.
ನ್ಯಾ. ಗುಲಾಮ್ ಮೊರ್ತುಜಾ ಮಜೂಂದಾರ್ ಅವರ ಅಧ್ಯಕ್ಷತೆಯ ನ್ಯಾಯಮಂಡಳಿಯು ಶೇಖ್ ಹಸೀನಾ ಅವರನ್ನು ಒಳಗೊಂಡು 50 ಜನರ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದೆ.
‘ಪ್ರಕರಣದಲ್ಲಿ ಅತ್ಯಂತ ಪ್ರಭಾವಿಯಾದವರನ್ನು ಬಂಧಿಸದಿದ್ದರೆ, ತನಿಖೆ ನಡೆಸುವುದೇ ಕಷ್ಟವಾಗಲಿದೆ’ ಎಂದು ಮುಖ್ಯ ಪ್ರಾಸಿಕ್ಯೂಟರ್ ಮೊಹಮ್ಮದ್ ತಜೂಲ್ ಇಸ್ಲಾಂ ನ್ಯಾಯಮಂಡಳಿಗೆ ಮನವಿ ಮಾಡಿದ್ದರು.
‘ಶೇಖ್ ಹಸೀನಾ ಹಾಗು ಅವರ ಅವಾಮಿ ಲೀಗ್ ಪಕ್ಷದ ಮುಖಂಡರ ವಿರುದ್ಧ ಕೊಲೆ, ಸಾಮೂಹಿಕ ಹತ್ಯೆ ಸೇರಿದಂತೆ ಇದುವರೆಗೂ ಒಟ್ಟು 60 ದೂರುಗಳು ದಾಖಲಾಗಿವೆ. ಹಸೀನಾ ಅವರ ಪುತ್ರ ಸಾಜೀದ್ ವಾಜೆದ್ ಅವರು ಕೆಲ ದಿನಗಳ ಹಿಂದೆ ಪ್ರತಿಕ್ರಿಯಿಸಿ, ‘ನಮ್ಮ ತಾಯಿ ಯಾವುದೇ ತಪ್ಪು ಮಾಡಿಲ್ಲ. ಆದರೂ ಬಾಂಗ್ಲಾದೇಶದಲ್ಲಿ ನಡೆಯುವ ತನಿಖೆಯನ್ನು ಅವರು ಎದುರಿಸಲಿದ್ದಾರೆ’ ಎಂದಿದ್ದರು.