ಮಲಯಾಳಂ ನಟ ನಿವೀನ್ ಪೌಳಿ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದ್ದು ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ನಿವೀನ್ ಹೇಳಿದ್ದಾರೆ. ಸದ್ಯ ನಟ ಪೊಲೀಸ್ ಮಹಾ ನಿರ್ದೇಶಕ ಹಾಗೂ ವಿಶೇಷ ತನಿಖಾ ತಂಡಕ್ಕೆ ಪತ್ರ ಬರೆದಿದ್ದು, ಈ ಆರೋಪದಲ್ಲಿ ತಕ್ಷಣ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ನಿವೀನ್ ಅವರನ್ನು ಬೆಂಬಲಿಸಿ ಅನೇಕರು ಮಾತನಾಡಿದ್ದರು. ಈಗ ಅವರು ತಮ್ಮ ತಪ್ಪಿಲ್ಲ ಎಂಬುದುನ್ನು ಸಾಬೀತು ಮಾಡಲು ತನಿಖೆಗೆ ಆದೇಶಿಸಿದ್ದಾರೆ.
ಈ ಘಟನೆ ನಡೆದಿದ್ದು ದುಬೈನಲ್ಲಿ ಎನ್ನಲಾಗಿದೆ. ಹೀಗಾಗಿ, ತನಿಖಾ ಸಂದರ್ಭದಲ್ಲಿ ತಾವು ಅಲ್ಲಿಗೆ ತೆರಳುವುದಿಲ್ಲ ಎಂಬುದನ್ನು ಸಾಬೀತು ಮಾಡಲು ಈಗಾಗಲೇ ಅವರು ಪಾಸ್ಪೋರ್ಟ್ನ ಪೊಲೀಸರಿಗೆ ನೀಡಿದ್ದಾರೆ. ಸತ್ಯ ಹೊರಬರಬೇಕು ಎಂದು ಅವರು ಆಗ್ರಹಿಸಿದ್ದಾರೆ. ‘ನನ್ನ ವಿರುದ್ಧ ಬಂದಿರೋದು ಸುಳ್ಳು ಆರೋಪ. ಈ ಪ್ರಕರಣದಲ್ಲಿ ತನಿಖೆ ಆಗಬೇಕು. ಈ ಪ್ರಕರಣದಿಂದ ತಮ್ಮ ಹೆಸರನ್ನು ತೆಗೆದುಹಾಕಿ’ ಎಂದು ನಟ ಮನವಿ ಮಾಡಿದ್ದಾರೆ.
ಇತ್ತೀಚೆಗೆ ಹೇಮಾ ಸಮಿತಿ ವರದಿ ಬಹಿರಂಗ ಆಗಿತ್ತು. ಈ ವೇಳೆ ಮಲಯಾಳಂ ಚಿತ್ರರಂಗದ ಮಹಿಳೆಯರಿಗೆ ಸಾಕಷ್ಟು ತೊಂದರೆಗಳು ಆಗುತ್ತಿವೆ ಎನ್ನುವ ಬಗ್ಗೆ ಉಲ್ಲೇಖ ಆಗಿತ್ತು. ಈ ಬೆನ್ನಲ್ಲೇ ಅನೇಕರು ತಮಾಗದ ಕಹಿ ಅನುಭವ ಹೇಳಿಕೊಂಡಿದ್ದರು. ಅದೇ ರೀತಿ ಮಹಿಳೆಯೊಬ್ಬರು ತಮಗೆ ಲೈಂಗಿಕ ಕಿರುಕುಳ ಉಂಟಾಗಿದೆ ಎಂದು ಹೇಳಿದ್ದರು. ಜೊತೆಗೆ ನಿವೀನ್ ಸೇರಿ ಐವರ ವಿರುದ್ಧ ಕೇಸ್ ದಾಖಲು ಮಾಡಿದ್ದರು.
‘ನನ್ನ ವಿರುದ್ಧ ಹೆಣ್ಣುಮಗಳು ಕಿರುಕುಳ ಆರೋಪ ಹೊರಿಸಿದ್ದಾರೆ. ಇದು ನಿಜವಲ್ಲ. ಇದು ಸುಳ್ಳು ಎಂಬುದನ್ನು ಸಾಬೀತು ಮಾಡಲು ನಾನು ಯಾವ ಹಂತಕ್ಕೆ ಹೋಗಲೂ ಸಿದ್ಧನಿದ್ದೇನೆ’ ಎಂದು ಅವರು ಹೇಳಿದ್ದರು. ಸಾಮಾನ್ಯವಾಗಿ ಈ ರೀತಿಯ ಪ್ರಕರಣದಲ್ಲಿ ಆರೋಪಿದಾರರು ತನಿಖೆ ಆಗಲಿ ಎಂದು ಕೋರುವುದು ಕಡಿಮೆ. ಆದರೆ, ನಿವೀನ್ ಅವರು ಬೇರೆ ಹಂತಕ್ಕೆ ತೆರಳಿದ್ದಾರೆ. ನಿವೀನ್ ಜೊತೆಗೆ ಮಲಯಾಳಂ ನಿರ್ಮಾಪಕ ಎಕೆ ಸುನೀಲ್ ಮೊದಲಾದವರ ವಿರುದ್ಧ ಈ ಆರೋಪ ಎದುರಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.