ಬೆಂಗಳೂರು ;- ನನ್ನ ಇಲಾಖೆಯಲ್ಲಿ ಇದುವರೆಗೂ ಒಂದೇ ಒಂದು ವರ್ಗಾವಣೆ ಮಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ಕೆಲವು ಒತ್ತಡದಲ್ಲಿ ಯಾರಿಗೆ ಯಾವ ಆದೇಶ ಎಂದು ಗೊತ್ತಾಗುವುದಿಲ್ಲ. ಎಲ್ಲವೂ ಒಂದು ಹಂತಕ್ಕೆ ಬರಲು ಸಮಯ ಬೇಕು. ಎಲ್ಲವನ್ನೂ ಸರಿಪಡಿಸಲಾಗುವುದು.
ಸಿಎಂ ಕಚೇರಿಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಕುಮಾರಸ್ವಾಮಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ನನ್ನ ಇಲಾಖೆಯಲ್ಲಿ ಇದುವರೆಗೂ ಒಂದೇ ಒಂದು ವರ್ಗಾವಣೆ ಮಾಡಿಲ್ಲ. ಅವರಿಗೆ ಮಾಹಿತಿ ಇದ್ದರೆ ನೀಡಲಿ ಎಂದರು.
ಇನ್ನೂ ತೆಲಂಗಾಣದಲ್ಲಿ ಶರ್ಮಿಳಾ ಅವರ ಕಾಂಗ್ರೆಸ್ ಸೇರ್ಪಡೆಗೆ ಡಿ.ಕೆ. ಶಿವಕುಮಾರ್ ಅವರ ಪಾತ್ರ ದೊಡ್ಡದಿದೆ ಎಂದು ಕೇಳಿದ ಮಾಧ್ಯಮಗಳ ಪ್ರಶ್ನೆಗೆ, ನಾನು ಆ ವಿಚಾರವಾಗಿ ಮಾತನಾಡುವುದಿಲ್ಲ. ಅವರದ್ದು ಬಹಳ ಗೌರವಯುತ ಕುಟುಂಬ. ಅವರ ತಂದೆ ಹಾಗೂ ನಾನು ಉತ್ತಮ ಸ್ನೇಹಿತರು. ಜತೆಯಲ್ಲಿ ರಾಜಕೀಯ ಮಾಡಿದ್ದೆವು. ರಾಜಶೇಖರ ರೆಡ್ಡಿ ಅವರಿಗೆ ನನ್ನ ಮೇಲೆ ಅಭಿಮಾನ ಇತ್ತು ಎಂದರು. ರಾಷ್ಟ್ರ ರಾಜಕಾರಣ ಪ್ರವೇಶಿಸುತ್ತೀರಾ ಎಂದು ಕೇಳಿದಾಗ, ನನಗೆ ಹಿಂದಿ ಬರುವುದಿಲ್ಲ. ನನಗೆ ಕೊಟ್ಟಿರುವ ಜವಾಬ್ದಾರಿ ನಿಭಾಯಿಸಿ, ಜನರಿಗೆ ಕೊಟ್ಟಿರುವ ಮಾತು ಉಳಿಸಿಕೊಂಡರೆ ಸಾಕು ಎಂದು ತಿಳಿಸಿದರು.