ಬೆಂಗಳೂರು:- ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಅಬಕಾರಿ ಖಾತೆ ಸಚಿವ ಆರ್.ಬಿ.ತಿಮ್ಮಾಪುರ ವಿರುದ್ಧ ED ಗೆ ದೂರು ಸಲ್ಲಿಸಿದ್ದಾರೆ.
ಅಬಕಾರಿ ಇಲಾಖೆ ಡಿಸಿ, ಡಿವೈಎಸ್ಪಿಗಳಿಂದ ಹಣ ಪಡೆದು ವರ್ಗಾವಣೆ ದಂಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರು ಸಲ್ಲಿಸಿದ್ದಾರೆ.
ಸಚಿವ ತಿಮ್ಮಾಪುರ ಅವರು ಲೋಕಸಭಾ ಚುನಾವಣೆಗೆ ಹಣ ಹೊಂದಿಸಲು ಇಲಾಖಾಧಿಕಾರಿಗಳ ವರ್ಗಾವಣೆಗೆ ಲಂಚ ಸ್ವೀಕರಿಸಿದ್ದಾರೆ. ವರ್ಗಾವಣೆ ಹೆಸರಿನಲ್ಲಿ ದಂಧೆ ನಡೆಸುತ್ತಿದ್ದಾರೆ. ಇಲ್ಲಿವರೆಗೆ 18 ಕೋಟಿ ಲಂಚ ಸ್ವೀಕರಿಸಿದ್ದಾರೆ. ಲಂಚದ ಹಣದಲ್ಲಿ ಸಚಿವರಿಗೆ ಸಿಂಹಪಾಲು ನೀಡಲಾಗಿದೆ. 18 ಕೋಟಿ ಹಣದಲ್ಲಿ 13 ಕೋಟಿ ಸಚಿವರ ಖಾತೆಗೆ ಬಿದ್ದಿದೆ. ಉಳಿದ ಹಣ ಸಹಾಯಕ ಕಾರ್ಯದರ್ಶಿ ಸೇರಿದಂತೆ ಕೋಲಾರ ಅಬಕಾರಿ ಡಿಸಿ ಬಸವರಾಜ ಸಂದಿಗ್ವಾಡ್, ರಂಗಪ್ಪ, ಬೆಂಗಳೂರು ದಕ್ಷಿಣ ಅಬಕಾರಿ ಡಿಸಿ ವಿವೇಕ್ ಖಾತೆಗೆ ತಲುಪಿದೆ ಎಂದು ದಿನೇಶ್ ಕಲ್ಲಹಳ್ಳಿ ಅವರು ದೂರಿನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಲಂಚದ ಹಣದಲ್ಲಿ ಅಧಿಕಾರಿಗಳು ಸಹ ಶಾಮೀಲಾಗಿದ್ದಾರೆ. ಅಬಕಾರಿ ಸಚಿವರ ಲಂಚಾವತಾರಕ್ಕೆ ಸರ್ಕಾರ ಕುಮ್ಮಕ್ಕು ನೀಡುತ್ತಿದೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಇಡಿಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ.