ನವದೆಹಲಿ: ಕೇಂದ್ರ ಸಚಿವ ಸಂಪುಟಕ್ಕೆ ನರೇಂದ್ರ ಸಿಂಗ್ ತೋಮರ್, ಪ್ರಹ್ಲಾದ್ ಸಿಂಗ್ ಪಟೇಲ್ ಮತ್ತು ರೇಣುಕಾ ಸಿಂಗ್ ಸಾರುತಾ ಅವರು ನೀಡಿದ್ದ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಗೀಕರಿಸಿದ್ದಾರೆ. ಇದರ ಬೆನ್ನಲ್ಲೇ ಶೋಭಾ ಕರಂದ್ಲಾಜೆ ಸೇರಿ ನಾಲ್ವರು ಕೇಂದ್ರ ಸಚಿವರಿಗೆ ಹೆಚ್ಚುವರಿ ಖಾತೆಗಳ ಉಸ್ತುವಾರಿ ನೀಡಲಾಗಿದೆ.
ಈಚೆಗೆ ನಡೆದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ ಹಿನ್ನೆಲೆಯಲ್ಲಿ ಇವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕೇಂದ್ರ ಸಚಿವ ಅರ್ಜುನ್ ಮುಂಡಾ ಅವರಿಗೆ ಈಗ ಇರುವ ಖಾತೆಯ ಜೊತೆಗೆ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರೂ ಆಗಿರುವ ಶೋಭಾ ಕರಂದ್ಲಾಜೆ ಅವರಿಗೆ ಹೆಚ್ಚುವರಿಯಾಗಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ರಾಜ್ಯ ಸಚಿವರ ಜವಾಬ್ದಾರಿಯನ್ನು ನೀಡಲಾಗಿದೆ. ರಾಜೀವ್ ಚಂದ್ರಶೇಖರ್ ಅವರು ತಮ್ಮ ಈಗಿರುವ ಖಾತೆ ಜೊತೆಗೆ ಹೆಚ್ಚುವರಿಯಾಗಿ ಜಲಶಕ್ತಿ ರಾಜ್ಯ ಸಚಿವರಾಗಿ ಕೆಲಸ ನಿರ್ವಹಿಸಲಿದ್ದಾರೆ.