ಪ್ರತೀ ಮನೆಯಲ್ಲೂ ಆಹಾರ, ಆರೋಗ್ಯ ಎಲ್ಲದಕ್ಕೂ ಬಳಕೆಯಾಗುವ ಸಾಂಬಾರು ಪದಾರ್ಥ ಎಂದರೆ ಅದು ಕರಿ ಮೆಣಸಿನ ಕಾಳು. ಕಾಳು ಮೆಣಸು ದೇಹಕ್ಕೆ ಉಷ್ಣವನ್ನುಂಟು ಮಾಡುವಂತಹದ್ದು. ಇದನ್ನು ಯಾವೆಲ್ಲಾ ಕಾಯಿಲೆಗಳಿಗೆ ಮನೆಮದ್ದುಗಳಾಗಿ ಬಳಸಬಹುದು ಎನ್ನುವುದನ್ನು ನೋಡಿ. ದಿನಕ್ಕೆ ಒಂದರಿಂದ ಎರಡು ಗ್ರಾಂ ಕಾಳು ಮೆಣಸನ್ನು ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು.
ವಾಂತಿ ಮತ್ತು ಅಜೀರ್ಣಕ್ಕೆ ಉತ್ತಮ
ಕಾಳು ಮೆಣಸು ಹೊಟ್ಟೆಯ ಸಮಸ್ಯೆಗೆ ಪರಿಣಾಮಕಾರಿಯಾಗಿದೆ. ಕರಿ ಮೆಣಸಿನ ಕಾಳಿನ ಪುಡಿಯನ್ನು ಬಿಸಿ ನೀರಿಗೆ ಹಾಕಿ ಅದಕ್ಕೆ ಒಂದು ಸಣ್ಣ ಚೂರು ಶುಂಠಿಯನ್ನು ಹಾಕಿ ಸೇವನೆ ಮಾಡಿದರೆ ವಾಂತಿಯ ಸಮಸ್ಯೆ ಇದ್ದರೆ ಅಥವಾ ಅಜೀರ್ಣವಾಗಿದ್ದರೆ ಸರಿಯಾಗುತ್ತದೆ.
ಕೆಮ್ಮು ನಿವಾರಣೆ
ಕೆಮ್ಮು ಕಾಳು ಮೆಣಸಿನ ಜೊತೆ ಕಲ್ಲುಪ್ಪು ಸೇರಿಸಿ ಜಗಿದು ಸೇವಿಸಬೇಕು ಇದರಿಂದ ಕೆಮ್ಮು ನಿವಾರಣೆಯಾಗುವುದಲ್ಲದೆ, ಗಂಟಲು ನೋವು ಕೂಡಾ ನಿವಾರಣೆಯಾಗುತ್ತದೆ. ಇನ್ನು ಮಕ್ಕಳಿಗೆ ಕಾಳು ಮೆಣಸಿನ ಪುಡಿಗೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಸೇವಿಸಲು ಕೊಡಿ. ಇದರಿಂದ ಕೆಮ್ಮಿನ ಸಮಸ್ಯೆ ನಿವಾರಣೆಯಾಗುತ್ತದೆ.
ಕೂದಲು ಉದುರುವಿಕೆ
ಕೆಲವರಿಗೆ ತಲೆಯ ಮೇಲೆ ಅಲ್ಲಲ್ಲಿ ಕೂದಲು ಉದುರಿ ಪ್ಯಾಚಸ್ಗಳು ಕಂಡುಬರುತ್ತವೆ. ಅದನ್ನು ನಿವಾರಿಸಲು ಕಾಳು ಮೆಣಸು ಸಹಕಾರಿಯಾಗಿದೆ. ಕಾಳು ಮೆಣಸನ್ನು ಎಳ್ಳೆಣ್ಣೆ ಮತ್ತು ತ್ರಿಫಲಾ ಪೌಡರ್ನ್ನು ಜೊತೆ ಸೇರಿಸಿ ಕೂದಲು ಉದುರಿದ ಜಾಗದಲ್ಲಿ ಹಚ್ಚಿದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ.
ಅಸ್ತಮಾ
ಕಾಳು ಮೆಣಸಿಗೆ ಚಕ್ಕೆ ಸೇರಿಸಿ ಪುಡಿಮಾಡಿ ಹಾಲಿಗೆ ಹಾಕಿ ಕುದಿಸಿ ಅದನ್ನು ಬೆಳಗ್ಗೆ ಹಾಗೂ ರಾತ್ರಿ ಸೇವಿಸಬೇಕು. ಇದರಿಂದ ಶ್ವಾಸಕೋಶದ ಸಮಸ್ಯೆ ಅಂದರೆ ಅಸ್ತಮಾದ ಸಮಸ್ಯೆ ನಿವಾರಣೆಯಾಗುತ್ತದೆ.
ಹಲ್ಲು ನೋವಿನ ನಿವಾರಣೆಗೆ
ಕಾಳು ಮೆಣಸಿಗೆ ಸ್ವಲ್ಪ ಲವಂಗ ಸೇರಿಸಿ ಜಜ್ಜಿ ಉಂಡೆ ಮಾಡಿ ಹಲ್ಲು ನೋವಿರುವ ಜಾಗಕ್ಕೆ ಇಟ್ಟರೆ ಕ್ರಮೇಣ ಹಲ್ಲು ನೋವು ನಿವಾರಣೆಯಾಗುತ್ತದೆ.