ಸುದೀಪ್ ನಟನೆಯ ಹೆಬ್ಬುಲಿ ಸಿನಿಮಾದಲ್ಲಿ ನಟಿಸಿದ್ದ ನಟಿ ಅಮಲಾ ಪೌಲ್ ತಮ್ಮ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ. ನಟಿ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದು ತಾಯಿ, ಮಗು ಇಬ್ಬರು ಆರೋಗ್ಯವಾಗಿರೋದಾಗಿ ತಿಳಿಸಿದ್ದಾರೆ. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಮಗುವಿನ ಹೆಸರನ್ನು ತಿಳಿಸಿದ್ದಾರೆ.
‘ಜೂನ್ 11ರಂದು ಜನಿಸಿದ ಪವಾಡ’ ಎಂದು ನಟಿ ಅಡಿಬರಹ ನೀಡಿದ್ದು, ಗಂಡು ಮಗುವಿಗೆ ‘ಇಲೈ’ ಎಂದು ಹೆಸರಿಟ್ಟಿದ್ದಾರೆ. ಇದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮಗುವನ್ನು ಮನೆಗೆ ಕರೆತರುವ ವೇಳೆ ಅಮಲಾರನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿದೆ.
ಕಳೆದ ವರ್ಷ ನವೆಂಬರ್ನಲ್ಲಿ ಕೊಚ್ಚಿಯಲ್ಲಿ ಉದ್ಯಮಿ ಜಗತ್ ದೇಸಾಯಿ ಜೊತೆ ಅಮಲಾ ಹಸೆಮಣೆ ಏರಿದ್ದರು. ಹಲವು ವರ್ಷಗಳ ಕಾಲ ಪ್ರೀತಿಸಿ ಬಳಿಕ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದರು. ಕನ್ನಡದ ‘ಹೆಬ್ಬುಲಿ’ ಸಿನಿಮಾದಲ್ಲಿ ಸುದೀಪ್ಗೆ ನಾಯಕಿಯಾಗಿ ಅಮಲಾ ನಟಿಸಿದ್ದರು. ಇತ್ತೀಚೆಗೆ ರಿಲೀಸ್ ಆದ ‘ಆಡುಜೀವಿತಂ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಅಂದ ಹಾಗೆ ಇದು ಅಮಲಾಗೆ ಎರಡನೇ ಮದುವೆ. ಮೊದಲು ನಿರ್ಮಾಪಕ ವಿಜಯ್ ಜೊತೆ ಮದುವೆಯಾಗಿದ್ದ ಅಮಲಾ ಮದುವೆಯಾದ ಕೆಲ ವರ್ಷಗಳಲ್ಲೇ ಪತಿಯಿಂದ ದೂರವಾಗಿದ್ದರು.