ನ್ಯೂಯಾರ್ಕ್: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾ (Canada) ಗಂಭೀರ ಆರೋಪದ ಕುರಿತು ಅಮೆರಿಕ (America) ಕಳವಳ ವ್ಯಕ್ತಪಡಿಸಿದೆ. ಕೆನಡಾ ಆರೋಪ ಸಂಬಂಧ ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಅಡ್ರಿಯೆನ್ ವ್ಯಾಟ್ಸನ್ ಪ್ರತಿಕ್ರಿಯಿಸಿ, ಪ್ರಧಾನಿ ಟ್ರುಡೊ ಅವರು ಉಲ್ಲೇಖಿಸಿರುವ ಆರೋಪಗಳ ಬಗ್ಗೆ ನಾವು ತೀವ್ರ ಕಳವಳ ಹೊಂದಿದ್ದೇವೆ. ನಾವು ನಮ್ಮ ಕೆನಡಾದ ಪಾರ್ಟ್ನರ್ಗಳೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತೇವೆ. ಕೆನಡಾದ ತನಿಖೆಯು ಮುಂದುವರಿಯುವುದು ಮತ್ತು ನ್ಯಾಯ ಒದಗಿಸುವುದು ನಿರ್ಣಾಯಕವಾಗಿದೆ ಎಂದು ಅವರು ತಿಳಿಸಿದ್ದಾರೆ.
ಜೂನ್ 18 ರಂದು ಹರ್ದೀಪ್ ಸಿಂಗ್ ನಿಜ್ಜರ್ ಮೇಲೆ ಗುಂಡು ಹಾರಿಸಲಾಗಿತ್ತು. ಭಾರತವು ಈತನನ್ನು ಮೋಸ್ಟ್ ವಾಂಟೆಡ್ ಭಯೋತ್ಪಾದಕ ಎಂದು ಘೋಷಿಸಿತು ಎಂಬುವುದು ಉಲ್ಲೇಖನೀಯ. ಈ ಮಧ್ಯೆ ಜೂನ್ 18 ರಂದು ವ್ಯಾಂಕೋವರ್ನ ಉಪನಗರವಾದ ಸರ್ರೆಯ ಗುರುದ್ವಾರದ ಬಳಿ ನಿಜ್ಜರ್ನನ್ನು ಗುಂಡಿಕ್ಕಿ ಕೊಲ್ಲಲಾಯಿತು. ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವೆ ಉದ್ವಿಗ್ನತೆ ನಿರಂತರವಾಗಿ ಹೆಚ್ಚುತ್ತಿದೆ. ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಪಾತ್ರವಿದೆ ಎಂದು ಆರೋಪಿಸಿ ಕೆನಡಾದಲ್ಲಿರುವ ಭಾರತೀಯ ರಾಯಭಾರಿಯನ್ನು ಉಚ್ಚಾಟಿಸಿದ ಬೆನ್ನಲ್ಲೇ ಭಾರತ ಸರ್ಕಾರ ಕೆನಡಾ ರಾಯಭಾರಿಗೆ ಸಮನ್ಸ್ ಜಾರಿ ಮಾಡಿದೆ.
ಜಿ20 ಶೃಂಗಸಭೆಯ ಸಂದರ್ಭದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಖಲಿಸ್ತಾನಿಗಳ ಹಿಂಸಾಚಾರ ಹಾಗೂ ವಿದೇಶಿ ಹಸ್ತಕ್ಷೇಪದ ಕುರಿತು ಮಾತನಾಡಿದ್ದರು. ಈ ಮಾತುಕತೆಯ ಬಳಿಕ ಭಾರತ ಮತ್ತು ಕೆನಡಾದ ಸಂಬಂಧ ಹಳಸಿದೆ. ಸಂಬಂದ ಹಳಸಿದ ಬೆನ್ನಲ್ಲೇ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತ ಕೈವಾಡವಿದೆ ಎಂಬ ಕೆನಡಾ ಆರೋಪವನ್ನು ಭಾರತ ತಿರಸ್ಕರಿಸಿದೆ.