1 ಮಿಲಿಯನ್ ಡಾಲರ್ ಬಹುಮಾನ ಸಿಕ್ಕ ಲಾಟರಿ ಟಿಕೆಟ್ ಒಂದನ್ನು ಕಳ್ಳತನ ಮಾಡಿದ ಆರೋಪದ ಮೇಲೆ ಭಾರತೀಯ ಮೂಲದ ವ್ಯಕ್ತಿಯೊಬ್ಬನನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ.
ಅಮೆರಿಕ ಟೆನ್ನೆಸೀ ರಾಜ್ಯದಲ್ಲಿ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ 23 ವರ್ಷ ವಯಸ್ಸಿನ ಮೀರ್ ಪಟೇಲ್ ಬಂಧಿತ ಆರೋಪಿ. ಈತ ತಾನು ಕೆಲಸ ಮಾಡುತ್ತಿದ್ದ ಪೆಟ್ರೋಲ್ ಬಂಕ್ ಗೆ ಬಂದಿದ್ದ ಗ್ರಾಹಕರೊಬ್ಬರ ಬಳಿಯಲ್ಲಿ ಇದ್ದ ಲಾಟರಿ ಟಿಕೆಟ್ ಅನ್ನು ಕಳ್ಳತನ ಮಾಡಿದ್ದ.
ಪೆಟ್ರೋಲ್ ಬಂಕ್ಗೆ ಬಂದ ಗ್ರಾಹಕ, ಬಂಕ್ನಲ್ಲೇ ಇದ್ದ ಮಳಿಗೆಯಲ್ಲಿ ತನ್ನ ಲಾಟರಿ ಟಿಕೆಟ್ ತೋರಿಸಿ ಇದಕ್ಕೆ ಬಹುಮಾನ ಬಂದಿದೆಯಾ ಚೆಕ್ ಮಾಡು ಎಂದು ಕೇಳಿದ. ಈ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಮೀರ್ ಪಟೇಲ್, ಲಾಟರಿ ಟಿಕೆಟ್ ಅನ್ನು ಸ್ಕ್ಯಾನ್ ಮಾಡಿ ನೋಡಿದಾಗ ಅದಕ್ಕೆ 1 ಮಿಲಿಯನ್ ಡಾಲರ್ ಹಣ ಬಹುಮಾನವಾಗಿ ಬಂದಿರೋದು ಗೊತ್ತಾಯ್ತು. ಆದರೆ, ಗ್ರಾಹಕನಿಗೆ ಸುಳ್ಳು ಹೇಳಿದ ಮೀರ್ ಪಟೇಲ್, ತುಂಬಾ ಕಡಿಮೆ ಹಣ ಬಹುಮಾನವಾಗಿ ಬಂದಿದೆ ಎಂದು ಹೇಳಿದ. ಹಣವನ್ನು ಗ್ರಾಹಕನಿಗೆ ನೀಡಿ ಲಾಟರಿ ಟಿಕೆಟ್ ಅನ್ನು ಕಸದ ಬುಟ್ಟಿಗೆ ಎಸೆದಿದ್ದ.
ಗ್ರಾಹಕ ಬಂಕ್ನಿಂದ ವಾಪಸ್ ಹೋದ ಬಳಿಕ ಕಸದ ಬುಟ್ಟಿಯಲ್ಲಿ ಇದ್ದ ಲಾಟರಿ ಟಿಕೆಟ್ ತೆಗೆದುಕೊಂಡು ಲಾಟರಿ ಆಫೀಸ್ಗೆ ಹೋದ ಮೀರ್ ಪಟೇಲ್, ತನಗೆ ಬಂಪರ್ ಬಹುಮಾನ ಬಂದಿರೋದಾಗಿ ಹೇಳಿದ. ಈ ವೇಳೆ ಅನುಮಾನಗೊಂಡ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದರು. ಮೀರ್ ಪಟೇಲ್ ಕೆಲಸ ಮಾಡುತ್ತಿದ್ದ ಪೆಟ್ರೋಲ್ ಬಂಕ್ಗೆ ಬಂದು ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದ ವೇಳೆ ಆತ ಗ್ರಾಹಕನಿಗೆ ಮೋಸ ಮಾಡಿದ್ದು ಬಯಲಾಗಿದೆ.
ಸದ್ಯ ಪಟೇಲ್ನನ್ನು ಬಂಧನ ಮಾಡಲಾಗಿದ್ದು, ಆತನ ವಿರುದ್ಧ ಆರ್ಥಿಕ ಅಪರಾಧ ಆರೋಪ ಹೊರಿಸಲಾಗಿದೆ. ಬಳಿಕ ಲಾಟರಿಯ ನೈಜ ಮಾಲೀಕನನ್ನು ಪತ್ತೆ ಮಾಡಿ ಆತನಿಗೆ ಲಾಟರಿ ಟಿಕೆಟ್ ಬಹುಮಾನದ ಪೂರ್ಣ ಮೊತ್ತ ನೀಡಲಾಗಿದೆ.