ವಾಷಿಂಗ್ಟನ್: ಉತ್ತರ ಲೂಸಿಯಾನಾದ ಶ್ರೆವೆಪೋರ್ಟ್ನಲ್ಲಿ ನಡೆಯುತ್ತಿದ್ದ ಅಮೆರಿಕ ಸ್ವಾತಂತ್ರ್ಯದಿನದ ಸಂಭ್ರಮಾಚರಣೆಯ ಸಂದರ್ಭ ನಡೆದ ಗುಂಡಿನ ದಾಳಿಯಲ್ಲಿ ಮೂರು ಮಂದಿ ಮೃತಪಟ್ಟಿದ್ದು ಕನಿಷ್ಟ 6 ಮಂದಿ ಗಾಯಗೊಂಡಿರುವುದಾಗಿ ಸಿಎನ್ಎನ್ ವರದಿ ಮಾಡಿದೆ.
ಪ್ರತೀ ವರ್ಷ ಜುಲೈ 4ರಂದು ಅಮೆರಿಕದ ಉತ್ತರ ಲೂಸಿಯಾನಾದ ಶ್ರೆವೆಪೋರ್ಟ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತದೆ. ಅಂತೆಯೇ ಈ ವರ್ಷ ಕೂಡ ಸ್ವಾಂತತ್ರ್ಯ ದಿನಾಚರಣೆ ನಡೆಯುತ್ತಿದ್ದು ಈ ವರ್ಷ ಎಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಹಾಜರಾಗಿದ್ದರು.
ಈ ವೇಳೆ ಏಕಾಏಕಿ ಗುಂಡಿನ ದಾಳಿ ಆರಂಭವಾಗಿದೆ. ಸಭಾಂಗಣದ ಹೊರಗೆ ವಾಹನಗಳನ್ನು ಪಾರ್ಕ್ ಮಾಡಿದ್ದರಿಂದ ಜನರು ಹೊರಗೆ ಓಡಿ ಹೋಗಲು ಕಷ್ಟವಾಗಿ ನೂಕುನುಗ್ಗಲು ಉಂಟಾಗಿದೆ. ಈ ಗೊಂದಲದಲ್ಲಿ ದುಷ್ಕರ್ಮಿಗಳನ್ನು ಪತ್ತೆ ಮಾಡಲು ಆಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಂಡಿನ ಸದ್ದು ಕೇಳಿ ಸ್ಥಳಕ್ಕೆ ಧಾವಿಸಿದಾಗ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದರೆ ಕನಿಷ್ಟ 7 ಮಂದಿ ಗಾಯಗೊಂಡಿದ್ದರು. ಗಾಯಗೊಂಡವರಲ್ಲಿ ಒಬ್ಬ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಶ್ರೆವೆಪೋರ್ಟ್ನ ಪೊಲೀಸ್ ಅಧಿಕಾರಿ ವ್ಯಾನ್ವ್ರೆ ಪ್ರತಿಕ್ರಿಯಿಸಿದ್ದಾರೆ.