ಪ್ರಧಾನಿ ನರೇಂದ್ರ ಮೋದಿ ಅವರ 2 ದಿನಗಳ ರಷ್ಯಾ ಭೇಟಿಯು ಅಮೆರಿಕದ ಜೋ ಬೈಡನ್ ಆಡಳಿತಕ್ಕೆ ಇರುಸುಮುರುಸು ತಂದಿದೆ. ಮೋದಿ ರಷ್ಯಾ ಭೇಟಿಯ ಅಸಮಾಧಾನವನ್ನು ಅಮೆರಿಕಾದ ಹಿರಿಯ ಅಧಿಕಾರಿಗಳು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಈ ಕುರಿತು ಭಾರತ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಜು.9ರಿಂದ ನ್ಯಾಟೋ ಸಮಾವೇಶ ಆರಂಭವಾಗಿತ್ತು. ಈ ವೇಳೆ ಮೋದಿ ರಷ್ಯಾಗೆ ಭೇಟಿ ನೀಡಿದ್ದನ್ನು ಬೈಡೆನ್ ಆಡಳಿತವು ಪ್ರಶ್ನಿಸಿದೆ. ಪ್ರಧಾನಿಯ ರಷ್ಯಾ ಭೇಟಿಯು ಬೈಡೆನ್ ಆಡಳಿತಕ್ಕೆ ಕಷ್ಟಕರ ಮತ್ತು ಅನನುಕೂಲ ತಂದಿದೆ. ಈ ವಿಷಯವನ್ನು ಭಾರತಕ್ಕೂ ಅಮೆರಿಕ ತಿಳಿಸಿದೆ. ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಭಾರತ ವನ್ನು ಪರೋಕ್ಷವಾಗಿ ಟೀಕಿಸಿದ್ದ ರಾಯಭಾರಿ ಎರಿಕ್ ಗಾರ್ಸೆಟ್ಟಿ, ಅಮೆರಿಕದ ಸ್ನೇಹವನ್ನು ಭಾರತವು ಹಗುರವಾಗಿ ಪರಿಗಣಿಸಬಾರದು ಎಂದು ಎಚ್ಚರಿಸಿದ್ದಾರೆ.