ಅಮೆರಿಕನ್ ಏರ್ ಲೈನ್ಸ್ ವಿಮಾನ ಟೇಕ್ ಆಫ್ ಆಗುವುದಕ್ಕೂ ಮುನ್ನ ರನ್ವೇನಲ್ಲೇ ಟೈರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡ ಘಟನೆ ಅಮೆರಿಕದ ಟ್ಯಾಂಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಫ್ಲೋರಿಡಾ ವಿಮಾನ ನಿಲ್ದಾಣದಿಂದ ಅಮೆರಿಕದ ಫಿಯೋನಿಕ್ಸ್ಗೆ ಈ ವಿಮಾನ ತೆರಳುತ್ತಿದ್ದು ಬೆಳಗ್ಗೆ 8 ಗಂಟೆಯ ವೇಳೆ ಈ ಅವಘಡ ಸಂಭವಿಸಿದೆ.
ಇನ್ನೇನು ವಿಮಾನ ಟೇಕ್ಆಫ್ ಆಗಬೇಕು ಎನ್ನುವಾಗ ವೇಗವಾಗಿ ಹೊರಟಿದ್ದ ವಿಮಾನದ ಬಲಭಾಗದ ಟೈರ್ ಸ್ಪೋಟಗೊಂಡು ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ ಪೈಲೆಟ್ ಸಮಯ ಪ್ರಜ್ಞೆಯಿಂದ ರನ್ ವೇನಲ್ಲೇ ವಿಮಾನ ನಿಲ್ಲಿಸಿದ್ದು ಯಾವುದೇ ಹಾನಿ ಸಂಭವಿಸಿಲ್ಲ. ಘಟನೆ ನಡೆದ ವೇಳೆ ವಿಮಾನದಲ್ಲಿ 174 ಪ್ರಯಾಣಿಕರು ಹಾಗೂ ಆರು ಸಿಬ್ಬಂದಿ ಇದ್ದರು.
ವಿಮಾನವನ್ನು ಟರ್ಮಿನಲ್ಗೆ ಕಳುಹಿಸಲಾಗಿದೆ ಎಂದು ಅಮೆರಿಕನ್ ಏರ್ಲೈನ್ಸ್ ವಕ್ತಾರ ಆಲ್ಫ್ರೆಡೊ ಗಾರ್ಡುನೊ ಹೇಳಿದ್ದಾರೆ. ಪ್ರಯಾಣಿಕರನ್ನು ಬೇರೊಂದು ವಿಮಾನಕ್ಕೆ ಸ್ಥಳಾಂತರಿಸಲಾಯಿತು, ಘಟನೆಯಿಂದಾಗಿ ಫ್ಲೋರಿಡಾ ವಿಮಾನ ನಿಲ್ದಾಣದಲ್ಲಿ ಇತರೆ ವಿಮಾನ ಕಾರ್ಯಚರಣೆಗಳಿಗೆ ತೊಂದರೆಯಾಗಿಲ್ಲ ಎಂದು ಏರ್ಲೈನ್ಸ್ ಹೇಳಿದೆ.