ಚುನಾವಣಾ ರಾಜ್ಯ ಕರ್ನಾಟಕಕ್ಕೆ ಕೇಂದ್ರ ನಾಯಕರು ಪದೇ ಪದೇ ಭೇಟಿ ನೀಡುತ್ತಿದ್ದು, ರಾಜ್ಯದಲ್ಲಿ ಬಿಜೆಪಿ (BJP) ಗೆಲುವಿಗೆ ಶ್ರಮಿಸುತ್ತಿದ್ದಾರೆ. ಅದರಂತೆ ಇಂದು ಮತ್ತೊಮ್ಮೆ ಕೇಂದ್ರ ಗೃಹಸಚಿವ ಅಮಿತ್ ಶಾ (AmitShah) ರಾಜ್ಯಕ್ಕೆ ಕಾಲಿಟ್ಟಿದ್ದು, ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಚುನಾವಣಾ ರಣತಂತ್ರಗಾರಿಕೆ ರೂಪಿಸಿದ್ದಾರೆ.
ಹುಬ್ಬಳ್ಳಿ (Hubballi) ಮೂಲಕ ಬಳ್ಳಾರಿಗೆ ಮಧ್ಯಾಹ್ನದ ವೇಳೆಗೆ ಆಗಮಿಸಿದ ಅಮಿತ್ ಶಾ, ಸಂಡೂರಿನಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿಯಾದರು. ವಿಜಯ ಸಂಕಲ್ಪ ಸಮಾವೇಶದಲ್ಲಿ ನೆರೆದಿದ್ದ ಲಕ್ಷಾಂತರ ಕಾರ್ಯಕರ್ತರನ್ನು ಉದ್ದೇಶಿಸಿ ಅಮಿತ್ ಶಾ ಭಾಷಣ ಮಾಡಿದ್ರು. ರಾಜ್ಯದಲ್ಲಿ ಸಂಪೂರ್ಣ ಬಹುಮತದ ಸರ್ಕಾರ ರಚನೆ ಆಗಲಿದೆ. ನನ್ನ ಜೊತೆ ಕೈ ಜೋಡಿಸಿ, ಸಂಪೂರ್ಣ ಪ್ರಮಾಣದ ಸರ್ಕಾರ ಕೊಡಿ. 2018ರ ಚುನಾವಣೆಯಲ್ಲಿ ಬಿಎಸ್‍ವೈ ನೇತೃತ್ವದಲ್ಲಿ ಚುನಾವಣೆಗೆ ಹೋಗಿದ್ವಿ. ಆದರೆ ಸ್ವಲ್ಪದರಲ್ಲಿ ನಮಗೆ ಸರ್ಕಾರ ರಚನೆ ಮಾಡಲು ಆಗಲಿಲ್ಲ. ಈ ವೇಳೆ ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚಿಸಿದವು. ಕಾಂಗ್ರೆಸ್ (Congress) ಒಂದು ತುಕುಡೆ ತುಕಡೆ ಗ್ಯಾಂಗ್. 2 ಪಕ್ಷಗಳಿಂದ ರಾಜ್ಯದಲ್ಲಿ ಭ್ರಷ್ಟಾಚಾರ ನಡೀತಿದೆ ಎಂದು ವಿಪಕ್ಷಗಳ ವಿರುದ್ಧ ಕಿಡಿಕಾರಿದ್ರು.
ಅಮಿತ್ ಶಾ ಸಮಾವೇಶ ಮುಗಿಸಿ ಕರ್ನಾಟಕ ಸೇವಾ ಸಂಘದಲ್ಲಿ ಕೋರ್ ಕಮಿಟಿ ಸಭೆ ನಡೆಸಿದರು. ಬಳ್ಳಾರಿ ವಿಭಾಗದ ನಾಲ್ಕು ಜಿಲ್ಲೆಯ 60 ಪ್ರಮುಖರು, ಟಿಕೆಟ್ ಆಕಾಂಕ್ಷಿಗಳ ಜೊತೆ ಸಭೆ ನಡೆಸಿದರು. ಚುನಾವಣೆಯಲ್ಲಿ ಗೆಲುವಿನ ಬಗ್ಗೆ ಚರ್ಚೆ ನಡೆಸಿದರು. ಬಳಿಕ ಸಂಡೂರು ಹೆಲಿಪ್ಯಾಡ್‍ಗೆ ಆಗಮಿಸಿದ ಅಮಿತ್ ಶಾ ಬೆಂಗಳೂರಿನತ್ತ ಪ್ರಯಾಣಿಸಿದ್ರು. ಬೆಂಗಳೂರಿನಲ್ಲಿ ಒಟ್ಟು 4 ಕಾರ್ಯಕ್ರಮಗಳಲ್ಲಿ ಅಮಿತ್ ಶಾ ಭಾಗಿ ಆಗಲಿದ್ದಾರೆ. ಖ್ಯಾತ ವಕೀಲರು, ಶಿಕ್ಷಣ ತಜ್ಞರು, ವೈದ್ಯರು, ನಗರದ ವಿವಿಧ ವಲಯದ ತಜ್ಞರೊಂದಿಗೆ ಸಂವಾದ ನಡೆಸಲಿರುವ ಶಾ ಬಳಿಕ ಬೆಂಗಳೂರು ಕೇಂದ್ರ, ಉತ್ತರ, ದಕ್ಷಿಣ ಜಿಲ್ಲೆಗಳ ಜನಪ್ರತಿನಿಧಿಗಳ ಜೊತೆ ಕೋರ್ ಕಮಿಟಿ ಸಭೆ ನಡೆಸಲಿದ್ದಾರೆ. ನಂತರ ಹಿರಿಯ ಬಿಜೆಪಿ ನಾಯಕರ ಜೊತೆ ಡಿನ್ನರ್ ಮೀಟಿಂಗ್ ನಡೆಸಲಿದ್ದಾರೆ.
ಬೆಂಗಳೂರನ್ನು ಟಾರ್ಗೆಟ್ ಮಾಡಿಕೊಂಡಿರುವ ಬಿಜೆಪಿ, ಬೆಂಗಳೂರಲ್ಲಿ ತಮ್ಮ ನಂಬರ್ ಹೆಚ್ಚಿಸಿಕೊಳ್ಳಲು ಕಸರತ್ತು ನಡಿಸ್ತಿದೆ. ಇಂದು ರಾತ್ರಿ ಬೆಂಗಳೂರು ಬಿಜೆಪಿ ಶಾಸಕರು, ಸಂಸದರು, ಪರಿಷತ್ ಸದಸ್ಯರೊಂದಿಗೆ ಚರ್ಚೆ ಮಾಡಲಿದ್ದು. 28 ಕ್ಷೇತ್ರಗಳ ಶಾಸಕ ಕಾರ್ಯವೈಖರಿ ಜೊತೆಗೆ ಪಿಚ್ ರಿಪೋರ್ಟ್ ಪಡೆಯಲಿದ್ದಾರೆ. ಬೆಂಗಳೂರಿನಲ್ಲಿ ಶತಾಯಗತಾಯ ಟಾರ್ಗೆಟ್ 20 ರೀಚ್ ಆಗಲು ರಣತಂತ್ರ ರೂಪಿಸಲಿದ್ದಾರೆ.
ಒಟ್ಟಾರೆ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಜಯಭೇರಿ ಬಾರಿಸಲು ಕೇಂದ್ರದ ನಾಯಕರು ಇನ್ನಿಲ್ಲದ ರಣತಂತ್ರ ನಡೆಸ್ತಿದ್ದು ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದು ಚುನಾವಣಾ ಫಲಿತಾಂಶದಲ್ಲಿ ಹೊರಬೀಳಲಿದೆ.