ಬೆಂಗಳೂರು: ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ಹಿಂದಿನ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಏಪ್ರಿಲ್ 2ರಂದು ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಸಂಚಾಲಕ ವಿ.ಸುನೀಲ್ ಕುಮಾರ್ ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
2ರಂದು ಇಡೀದಿನ ಕರ್ನಾಟಕದಲ್ಲಿ ಬೇರೆಬೇರೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. 370ನೇ ವಿಧಿಯನ್ನು ರದ್ದು ಮಾಡುವ ಮೂಲಕ ದೇಶ ಒಂದು ಎಂಬ ಸಂದೇಶ ನೀಡುವ ಗಟ್ಟಿತನದ ನಿರ್ಧಾರ ಪ್ರಕಟಿಸಿದವರು ಅಮಿತ್ ಶಾ ಅವರು ಎಂದು ತಿಳಿಸಿದರು. ಅವರ ಭೇಟಿ ನಮ್ಮಲ್ಲಿ ಉತ್ಸಾಹ ಮೂಡಿಸುತ್ತಿದೆ ಎಂದು ಹೇಳಿದರು. ದೇಶ ಒಡೆಯುವ ಹೇಳಿಕೆ ನೀಡಿದ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರು ನಮ್ಮ ಕಣ್ಮುಂದೆ ಇದ್ದಾರೆ. ದೇಶ ವಿಭಜನೆಯು ಕಾಂಗ್ರೆಸ್ ಮಾನಸಿಕತೆ ಎಂದು ಆಕ್ಷೇಪಿಸಿದರು.
ಆದರೆ, ನಮ್ಮ ಮಾನಸಿಕತೆ ದೇಶ ಜೋಡಿಸುವುದು ಎಂದು ತಿಳಿಸಿದರು. ಅಮಿತ್ ಶಾ ಅವರು ಚನ್ನಪಟ್ಟಣ ದಿಂದ ಚುನಾವಣಾ ಪ್ರಚಾರ ಆರಂಭಿಸುತ್ತಾರೆ. ದೇಶ ಒಡೆಯುವವರು ಬೇಕೇ ಅಥವಾ ದೇಶ ಒಂದು ಮಾಡುವವರು ಬೇಕೇ ಎಂಬ ಪ್ರಶ್ನೆಯ ಅಡಿಯಲ್ಲೇ ಈ ಚುನಾವಣೆ ನಡೆಯಲಿದೆ. ದೇಶ ಒಡೆಯುವ ಮಾನಸಿಕತೆಯನ್ನೇ ಸಮರ್ಥಿಸುವ ಕಾಂಗ್ರೆಸ್, ದೇಶ ಒಂದು ಮಾಡುವುದಾಗಿ ಸಂದೇಶ ನೀಡುವ ಅಮಿತ್ ಶಾ ಅವರು ಚನ್ನಪಟ್ಟಣದಲ್ಲಿ ರೋಡ್ ಷೋ ಮೂಲಕ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದರು.