ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುಜರಾತ್ನ ಗಾಂಧಿನಗರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಸಲ್ಲಿಸಿದ ಅಫಿಡವಿಟ್ನಲ್ಲಿ ಅವರು 36 ಕೋಟಿ ರೂ. ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಯನ್ನು ಘೋಷಿಸಿದ್ದಾರೆ. ಅವರ ಪತ್ನಿ ಬಳಿ 31 ಕೋಟಿ ರೂ. ಆಸ್ತಿ ಇದೆ. ಆದರೆ, ಶಾ ತಮ್ಮ ಬಳಿಯಲ್ಲಿ ಕಾರಿಲ್ಲ ಎಂದು ಹೇಳಿದ್ದಾರೆ. ಬಿಜೆಪಿ ಹಿರಿಯ ನಾಯಕ ಅಮಿತ್ ಶಾ ಅವರ ಅಫಿಡವಿಟ್ ಪ್ರಕಾರ, ಅವರು ಸ್ವಂತ ಕಾರು ಹೊಂದಿಲ್ಲ.
20 ಕೋಟಿ ರೂ. ಮೌಲ್ಯದ ಚರ ಆಸ್ತಿ ಮತ್ತು 16 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳನ್ನು ಅವರು ಹೊಂದಿದ್ದಾರೆ. ಶಾ ಬಳಿಯಲ್ಲಿ 72 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಇದ್ದರೆ, ಅವರ ಪತ್ನಿ ಬಳಿ 1.10 ಕೋಟಿ ರೂ. ಮೌಲ್ಯದ ಚಿನ್ನಾಭರಣ ಇದೆ. ಅಮಿತ್ ಶಾ ಅವರ ಪತ್ನಿ ಸೋನಾಲ್ ಶಾ 22.46 ಕೋಟಿ ರೂ. ಮೌಲ್ಯದ ಚರ ಆಸ್ತಿ ಹಾಗೂ 9 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಸೇರಿದಂತೆ 31 ಕೋಟಿ ರೂ.ಗೂ ಅಧಿಕ ಮೊತ್ತದ ಆಸ್ತಿ ಹೊಂದಿದ್ದಾರೆ.
ಗೃಹ ಸಚಿವರ ಹೆಸರಿನಲ್ಲಿ 15.77 ಲಕ್ಷ ರೂ. ಸಾಲವಿದ್ದರೆ, ಅವರ ಪತ್ನಿ 26.32 ಲಕ್ಷ ರೂ. ಸಾಲ ಹೊಂದಿದ್ದಾರೆ ಎಂದು ಪ್ರಮಾಣ ಪತ್ರದಲ್ಲಿ ಅಮಿತ್ ಶಾ ತಿಳಿಸಿದ್ದಾರೆ. 2022-23ರಲ್ಲಿ ಅಮಿತ್ ಶಾ ಅವರು 75.09 ಲಕ್ಷ ರೂ. ವಾರ್ಷಿಕ ಆದಾಯ ಹೊಂದಿದ್ದರೆ, ಅವರ ಪತ್ನಿಯ ವಾರ್ಷಿಕ ಆದಾಯ 39.54 ಲಕ್ಷ ರೂ. ಆಗಿದೆ. ಸಂಸದರ ವೇತನ, ಮನೆ ಮತ್ತು ಭೂಮಿ ಬಾಡಿಗೆಗಳು, ಕೃಷಿ ಆದಾಯ ಹಾಗೂ ಷೇರು ಮತ್ತು ಲಾಭಾಂಶಗಳಿಂದ ಬರುವ ಆದಾಯ ತಮ್ಮ ಆದಾಯದ ಮೂಲ ಎಂದು ಅಮಿತ್ ಶಾ ಘೋಷಿಸಿಕೊಂಡಿದ್ದಾರೆ.
ಅಫಿಡವಿಟ್ನ ವೃತ್ತಿ ವಿಭಾಗದಲ್ಲಿ ಅಮಿತ್ ಶಾ ಅವರು ರೈತ ಮತ್ತು ಸಮಾಜ ಸೇವಕ ಎಂದು ಹೇಳಿದ್ದಾರೆ. ಅವರ ವಿರುದ್ಧ ಮೂರು ಕ್ರಿಮಿನಲ್ ಪ್ರಕರಣಗಳು ಇವೆ ಎಂದು ತಿಳಿಸಿದ್ದಾರೆ.ಬಿಜೆಪಿ ನಾಯಕ ಅಮಿತ್ ಶಾ ಅವರು ಶಾಸಕರಾಗಿ ಮತ್ತು ನಂತರ ಸಂಸದರಾಗಿ 30 ವರ್ಷಗಳಿಂದ ಗಾಂಧಿನಗರವನ್ನು ಪ್ರತಿನಿಧಿಸುತ್ತಿದ್ದಾರೆ. ಸದ್ಯ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಗೃಹ ಸಚಿವರಾಗಿದ್ದಾರೆ.