ಬಾಲಿವುಡ್ ಚಿತ್ರರಂಗದ ಹಿರಿಯ ನಟ ಬಿಗ್ ಬಿ ಅಮಿತಾಭ್ ಬಚ್ಚನ್ ಮಾರ್ಚ್ 15ರಂದು ಮುಂಬೈನ ಕೋಕಿಲಾಬೆನ್ ಧೀರೂಭಾಯ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿದೆ ಎಂದು ಹೇಳಲಾಗಿತ್ತು. ನೆಚ್ಚಿನ ನಟ ಏಕಾಏಕಿ ಆಸ್ಪತ್ರೆಗೆ ದಾಖಲಾದಾಗ ಅಭಿಮಾನಿಗಳಿಗೆ ಆತಂಕ ಉಂಟಾಗಿತ್ತು. ಇದೀಗ ಬಚ್ಚನ್ ಆರೋಗ್ಯ ಸುಧಾರಿಸಿದ್ದು ಮನೆಗೆ ಮರಳಿದ್ದಾರೆ.
ಅಮಿತಾಭ್ ಬಚ್ಚನ್ಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. ಈ ವಿಚಾರ ತಿಳಿದಾಕ್ಷಣ ಅಮಿತಾಭ್ ಬಚ್ಚನ್ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಉಂಟಾಗಿರಬಹುದು ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅವರಿಗೆ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಉಂಟಾಗಿಲ್ಲ. ನಟನ ಕಾಲಿನ ರಕ್ತನಾಳದ ಸಮಸ್ಯೆ ಉಂಟಾಗಿತ್ತು. ಇದಕ್ಕಾಗಿ ಅವರಿಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. ಅಮಿತಾಭ್ ಶುಕ್ರವಾರ ಸಂಜೆಯೇ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದು ಸದ್ಯ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ.
ಅಮಿತಾಭ್ ಟ್ವಿಟರ್ನಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅವರು ಸದಾ ಒಂದಲ್ಲಾ ಒಂದು ವಿಚಾರದ ಬಗ್ಗೆ ಟ್ವೀಟ್ ಮಾಡುತ್ತಾ ಇರುತ್ತಾರೆ. ಆಸ್ಪತ್ರೆಗೆ ಅಡ್ಮಿಟ್ ಆಗುವ ಸುದ್ದಿ ಹೊರ ಬೀಳುವುದಕ್ಕೂ ಮೊದಲು ಟ್ವಿಟರ್ನಲ್ಲಿ,‘ಎಂದೆಂದಿಗೂ ಚಿರಋಣಿ’ ಎಂದು ಬರೆದುಕೊಂಡಿದ್ದರು.