ಬಾಲಿವುಡ್ ನ ಹಿರಿಯ ನಟ, ಬಿಗ್ ಬಿ ಅಮಿತಾಬ್ ಬಚ್ಚನ್ ಇಂದು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾಗಿದ್ದು, ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಸಾಮಾನ್ಯವಾಗಿ ಹೃದಯಾಘಾತ ಸಂಭವಿಸಿದಾಗ ವೈದ್ಯರು ಆಂಜಿಯೋಪ್ಲಾಸ್ಟಿ ಮಾಡಲು ಸಲಹೆ ನೀಡುತ್ತಾರೆ. ಆದರೆ ಅಮಿತಾಬ್ ಬಚ್ಚನ್ ಅವರ ಕಾಲಿನ ಸಮಸ್ಯೆಯಿದ್ದು, ಹೀಗಾಗಿ ಕಾಲಿಗೆ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಬಾಹ್ಯ ಆಂಜಿಯೋಪ್ಲ್ಯಾಸ್ಟಿ ಎಂದರೆ ಅಪಧಮನಿಯ ಹೊರಭಾಗದಲ್ಲಿ ರಕ್ತ ನಾಳಗಳನ್ನು ತೆರೆಯಲು ಆಂಜಿಯೋಪ್ಲ್ಯಾಸ್ಟಿ ವೈದ್ಯಕೀಯ ಬಲೂನ್ ಅನ್ನು ಬಳಸಲಾಗುತ್ತದೆ. ಹೃದಯದಂತೆ ದೇಹದ ಇತರ ಭಾಗಗಳಲ್ಲಿಯೂ ಸಮಸ್ಯೆ ಕಂಡುಬಂದಾಗ ಅಥವಾ ರಕ್ತದ ಹರಿವು ಸರಿಯಾಗಿಲ್ಲದಿದ್ದಾಗ ಆಂಜಿಯೋಪ್ಲ್ಯಾಸ್ಟಿ ಮಾಡಲಾಗುತ್ತದೆ. ರಕ್ತನಾಳಗಳನ್ನು ಅಗಲಗೊಳಿಸಲು ಈ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತದೆ. ಈ ಚಿಕಿತ್ಸೆಯು ರಕ್ತವು ಸರಿಯಾಗಿ ಹರಿಯುವಂತೆ ಮಾಡುತ್ತದೆ. ಹಾಗೆಯೇ ರಕ್ತ ಹೆಪ್ಪುಗಟ್ಟುವಿಕೆಯನ್ನು ಕಡಿಮೆ ಮಾಡುತ್ತದೆ.
ಹೃದಯದ ಹೊರತಾಗಿ, ಸೊಂಟದ ಅಪಧಮನಿ, ತೊಡೆಯ ಅಪಧಮನಿ, ಮೊಣಕಾಲಿನ ಹಿಂದಿನ ಅಪಧಮನಿ, ಕೆಳ ಕಾಲಿನ ಅಪಧಮನಿಗೂ ಆಂಜಿಯೋಪ್ಲ್ಯಾಸ್ಟಿ ಮಾಡಲಾಗುತ್ತದೆ. ಸದ್ಯ ಬಿಗ್ ಬಿ ಆರೋಗ್ಯ ಸುಧಾರಿಸಿದ್ದು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.