ಜೈಪುರ್: 11 ವರ್ಷದ ಬಾಲಕಿಯ ಮೇಲೆ ಆಕೆಯ ಇಬ್ಬರು ಸೋದರ ಸಂಬಂಧಿಗಳೇ ಅತ್ಯಾಚಾರ ಮಾಡಿರುವ ಘಟನೆ ರಾಜಸ್ಥಾನದ (Rajasthan) ಉದಯಪುರದಲ್ಲಿ (Udaipur) ನಡೆದಿದೆ. ಇಬ್ಬರು ಸೋದರ ಸಂಬಂಧಿಗಳೂ ಅಪ್ರಾಪ್ತರಾಗಿದ್ದು 13 ಮತ್ತು 15 ವರ್ಷದವರಾಗಿದ್ದಾರೆ ಎಂದು ಪೊಲೀಸರು (Police) ತಿಳಿಸಿದ್ದಾರೆ. ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಉದಯಪುರದ ಅಂಬಾಮಾತಾ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕೃತ್ಯ ಎಸಗಿದ ಇಬ್ಬರನ್ನು ಬಂಧಿಸಲಾಗಿದೆ. ಮುಂದಿನ ಕಾನೂನು ಪ್ರಕ್ರಿಯೆವರೆಗೂ ಬಾಲಾಪರಾಧಿ ಕೇಂದ್ರಕ್ಕೆ ವರ್ಗಾಯಿಸಲು ನಿರ್ಧಿರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂತ್ರಸ್ತ ಬಾಲಕಿ ತನ್ನ ತಂದೆಯ ಚಿಕ್ಕಮ್ಮನ ನಿವಾಸಕ್ಕೆ ಭೇಟಿ ನೀಡಿದ್ದಳು.
ಅಲ್ಲಿ ಆಕೆಯ 13 ಮತ್ತು 15 ವರ್ಷ ವಯಸ್ಸಿನ ಇಬ್ಬರು ಸೋದರ ಸಂಬಂಧಿಗಳು ಅತ್ಯಾಚಾರ ಎಸಗಿದ್ದಾರೆ. ಸ್ವಲ್ಪ ಸಮಯದ ನಂತರ ಬಾಲಕಿಯ ಆರೋಗ್ಯ ಹದಗೆಟ್ಟಿದೆ. ಕೂಡಲೇ ಆಕೆಯ ಸಂಬಂಧಿಕರು ಅವಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಎಸ್ಪಿ ಚೇತನಾ ಭಾಟಿ ಅವರು ಘಟನೆಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಲಾಗುವುದು ಎಂದಿದ್ದಾರೆ.