ಬೆಂಗಳೂರು ;- ರಾಜಧಾನಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂಗ ದಿಲ್ಲಿಗೆ ಹೊರಟಿದ್ದ ವಿಮಾನದಲ್ಲಿ ವೃದ್ದೆಗೆ ಹೃದಯಸ್ತಂಭನವಾಗಿರುವ ಘಟನೆ ಜರುಗಿದೆ. ಈ ವೇಳೆ ಬೆಂಗಳೂರಿನ ವೈದ್ಯ ಡಾ.ನಿರಂತರ ಗಣೇಶ್ ಅವರು ಆಪತ್ಬಾಂಧವರಾಗಿದ್ದಾರೆ.
ಹೊಸ ದಿಲ್ಲಿಗೆ ತೆರಳುತ್ತಿದ್ದ ಇಂಡಿಗೋ ಏರ್ಲೈನ್ಸ್ಗೆ ಸೇರಿದ ವಿಮಾನದಲ್ಲಿ ವೃದ್ದ ಮಹಿಳೆಯೊಬ್ಬರು ಮಾರ್ಗ ಮಧ್ಯದಲ್ಲೇ ಹೃದಯಾಘಾತಕ್ಕೆ ಒಳಗಾದರು. ಈ ವೇಳೆ ವಿಮಾನದಲ್ಲಿ ಇದ್ದ ವೈದ್ಯರೊಬ್ಬರು ಮಹಿಳೆಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ದಿಲ್ಲಿಯಲ್ಲಿ ವಿಮಾನ ಲ್ಯಾಂಡ್ ಆದ ಕೂಡಲೇ ಮಹಿಳೆಯನ್ನು ತುರ್ತಾಗಿ ಆಸ್ಪತ್ರೆಗೆ ರವಾನಿಲಾಯ್ತು. ಅದೃಷ್ಟವಶಾತ್ ಅವರ ಆರೋಗ್ಯ ಸುಧಾರಣೆ ಕಂಡಿದೆ. ಪ್ರಾಥಮಿಕ ಚಿಕಿತ್ಸೆ ನೀಡಿ ಜೀವ ಉಳಿಸಿದ ವೈದ್ಯರಿಗೆ ಮಹಿಳೆಯ ಸಂಬಂಧಿಕರು ಧನ್ಯವಾದ ಅರ್ಪಿಸಿದ್ದಾರೆ.
ಬುಧವಾರ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಿಲ್ಲಿಯತ್ತ ಇಂಡಿಗೋ ವಿಮಾನ 6ಇ 869 ಹೊರಟಿತ್ತು. ದಿಲ್ಲಿ ತಲುಪಲು ಕೆಲವು ಸಮಯ ಇದ್ದ ಸಂದರ್ಭದಲ್ಲಿ ವಿಮಾನದಲ್ಲಿ ಇದ್ದ 60 ವರ್ಷ ವಯಸ್ಸಿನ ರೋಸಮ್ಮ ಅವರಿಗೆ ಅನಾರೋಗ್ಯ ಕಾಡಿತು. ಉಸಿರಾಡಲು ಕಷ್ಟ ಪಡುತ್ತಿದ್ದ ಈ ಮಹಿಳೆ ಹೃದಯಾಘಾತಕ್ಕೆ ತುತ್ತಾದರು. ಈ ವೇಳೆ ವಿಮಾನದ ಸಿಬ್ಬಂದಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೈದ್ಯರನ್ನು ಸಂಪರ್ಕಿಸಿದರು.
ಡಾ. ನಿರಂತರ ಗಣೇಶ್ ಅವರು ಅದೃಷ್ಟವಶಾತ್ ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಅವರು ಮೂಲತಃ ಆರ್ಥೋಪೆಡಿಕ್ ಸರ್ಜನ್. ಬೆಂಗಳೂರಿನ ಜಾಲಹಳ್ಳಿಯ ಕ್ಯಾನ್ಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ವೈದ್ಯರಿಗಾಗಿ ಮೊರೆ ಇಟ್ಟ ಕೂಡಲೇ ಅವರು ನೆರವಿಗೆ ಧಾವಿಸಿ ಮಹಿಳೆಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.
ಅಂದರೆ ಆಕೆಯ ಶ್ವಾಸಕೋಶಕ್ಕೆ ಬಾಯಿಯಿಂದ ಗಾಳಿ ತುಂಬುವ ಪ್ರಕ್ರಿಯೆ ಹಾಗೂ ಎದೆಯ ಭಾಗವನ್ನು ಒತ್ತುವ ಮೂಲಕ ಶ್ವಾಸಕೋಶ ಹಾಗೂ ಹೃದಯವನ್ನು ಪುನರುಜ್ಜೀವಗೊಳಿಸುವ ಪ್ರಕ್ರಿಯೆ ನಡೆಸಲಾಯ್ತು. ಈ ಪ್ರಾಥಮಿಕ ಚಿಕಿತ್ಸೆಗೆ ಮಹಿಳೆ ಸೂಕ್ತವಾಗಿ ಸ್ಪಂದಿಸಿದರು. ಆಕೆಯ ಅಕ್ಕ ಪಕ್ಕ ಕುಳಿತಿದ್ದ ಪ್ರಯಾಣಿಕರ ಮೇಲೆ ಮಹಿಳೆ ಬಿದ್ದಿದ್ದ ಕಾರಣ ಎಲ್ಲರೂ ಭಯಗೊಂಡಿದ್ದರು. ಆದರೆ, ಆಕೆಯ ಪರಿಸ್ಥಿತಿ ಸುಧಾರಿಸಿತು. ಆಕೆ ಎದ್ದು ಕುಳಿತುಕೊಳ್ಳುವಂತಾಯ್ತು.