ಮುಂಬೈ: ಅಪ್ರಾಪ್ತ ಹುಡುಗಿಯನ್ನು ಅನುಚಿತವಾಗಿ ಸ್ಪರ್ಶಿಸಿ ʻಹಾಟ್ʼಎಂದು ಕರೆದಿದ್ದಕ್ಕಾಗಿ 50 ವರ್ಷದ ವೃದ್ಧನಿಗೆ ಮುಂಬೈ ವಿಶೇಷ ನ್ಯಾಯಾಲಯವು (Mumbai Speical Court) 3 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ಕೃತ್ಯವು ಆರೋಪಿಯು ಲೈಂಗಿಕ ದೌರ್ಜನ್ಯ ಎಸಗುವ ಉದ್ದೇಶವನ್ನು ತೋರಿಸುತ್ತದೆ ಎಂದು ಕೋರ್ಟ್ ಗಮನಿಸಿದೆ. ಈ ಹಿನ್ನೆಲೆಯಲ್ಲಿ 2016ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ 3 ವರ್ಷ ಜೈಲು (Jail) ಶಿಕ್ಷೆ ವಿಧಿಸಿದೆ.
ವಿಶೇಷ ಪೋಕ್ಸೊ ನ್ಯಾಯಾಲಯದ (POCSO Court) ನ್ಯಾಯಾಧೀಶರಾದ ಎಸ್.ಸಿ ಜಾಧವ್ ಅವರು ಡಿಸೆಂಬರ್ 14 ರಂದು ಆರೋಪಿಗೆ ಭಾರತೀಯ ದಂಡ ಸಂಹಿತೆಗೆ (IPC) ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಹಿಂಬಾಲಿಸುವುದು ಮತ್ತು ಕಿರುಕುಳ ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ದೋಷಿ ಎಂದು ಪರಿಗಣಿಸಿ ತೀರ್ಪು ನೀಡಿದ್ದಾರೆ.
ಈ ಪ್ರಕರಣವು 2016ರ ಮೇ 24ರಂದು ನಡೆದಿತ್ತು. ಆಗ ಹುಡುಗಿಗೆ 13 ವರ್ಷ ವಯಸ್ಸಾಗಿತ್ತು. ಸಂತ್ರಸ್ತೆ ಮತ್ತು ಪ್ರಾಸಿಕ್ಯೂಷನ್ ಸಾಕ್ಷಿಯ ಒಟ್ಟಾರೆ ಸಾಕ್ಷ್ಯವನ್ನು ಪರಿಶೀಲಿಸಿಸಲಾಯಿತು. ಈ ವೇಳೆ ಹುಡುಗಿ ಆ ದಿನಾಂಕದಂದು ಅಂದು ಮಸೀದಿ ಬಳಿ ನಿಂತಿದ್ದಾಗ ಆರೋಪಿ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದ,
ಜೊತೆಗೆ ಆಕೆ ತುಂಬಾ ʻಹಾಟ್ʼ ಆಗಿ ಕಾಣ್ತಿದ್ದಾಳೆ ಎಂದು ಕರೆದಿದ್ದ. ಅಷ್ಟೇ ಅಲ್ಲದೇ ಆಕೆ ಕೆನ್ನೆಗೆ ಮುತ್ತಿಡಲು ಬಯಸಿದ್ದ, ಆಕೆಯನ್ನು ತನ್ನೊಂದಿಗೆ ಕೆರೆದುಕೊಂಡು ಹೋಗಬೇಕು ಅನ್ನಿಸುತ್ತದೆ ಎಂಬ ಮಾತುಗಳನ್ನಾಡಿರುವುದು ಸಾಬೀತಾಗಿದೆ. ಆರೋಪಿಯ ಈ ಹೇಳಿಕೆಗಳು ಲೈಂಗಿಕ ದೌರ್ಜನ್ಯ ಎಸಗುವ ಉದ್ದೇಶ ಸೂಚಿಸುತ್ತದೆ ಎಂಬುದನ್ನು ಗಮನಿಸಿ ಆರೋಪಿಗೆ ಶಿಕ್ಷೆ ವಿಧಿಸಿದೆ