ಕೋಟ್ಯಾಧಿಪತಿ ಅಂಬಾನಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಹಸೆಮಣೆ ಏರಲಿದ್ದಾರೆ. ಈಗಾಗಲೇ ಮದುವೆಯ ಮುನ್ನದ ಕಾರ್ಯಕ್ರಮಗಳು ಆರಂಭವಾಗಿದ್ದು ದೇಶ, ವಿದೇಶದಿಂದ ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ. ಗುಜರಾತ್ನ ಜಾಮ್ನಗರದಲ್ಲಿ ನಡೆದ ಪ್ರೀ-ವೆಡ್ಡಿಂಗ್ ಸಮಾರಂಭದಲ್ಲಿ ಪುತ್ರ ಅನಂತ್ ಅಂಬಾನಿ ತಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದಂತೆ ಮುಖೇಶ್ ಅಂಬಾನಿ ಭಾವುಕರಾಗಿದ್ದಾರೆ.
ಬಾಲ್ಯದಲ್ಲಿ ಎದುರಾದ ಆರೋಗ್ಯದ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು, ‘ಈ ಮೂಲಕ ನನ್ನ ಕುಟುಂಬವು ನನಗೆ ತುಂಬ ವಿಶೇಷ ಭಾವನೆ ಕೊಟ್ಟಿದೆ. ಆದರೆ ನನ್ನ ಜೀವನವು ಗುಲಾಬಿಗಳ ಹಾಸಿಗೆಯಂತಿಲ್ಲ. ನಾನು ಮುಳ್ಳಿನಿಂದ ಉಂಟಾಗುವಂತ ನೋವನ್ನು ಅನುಭವಿಸಿದ್ದೇನೆ. ನಾನು ಬಾಲ್ಯದಿಂದಲೂ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದೇನೆ, ಆದರೆ ನನ್ನ ತಂದೆ-ತಾಯಿ ಮಾತ್ರ ಎಂದಿಗೂ ನನ್ನ ಕೈ ಬಿಡಲಿಲ್ಲ’ ಎಂದಿದ್ದಾರೆ.
‘ನಾನು ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಅನುಭವಿಸಿದ್ದೇನೆ. ಆಗ ಸದಾ ನನ್ನ ಬೆಂಬಲಕ್ಕೆ ನಿಂತಿದ್ದು ನನ್ನ ಕುಟುಂಬದವರು’ ಎಂದು ಅನಂತ್ ಹೇಳಿದರು. ಈ ಮಾತುಗಳನ್ನು ಕೇಳುತ್ತಿದ್ದಂತೆ ಭಾವೋದ್ವೇಗಕ್ಕೆ ಒಳಗಾದ ಮುಖೇಶ್ ಅಂಬಾನಿ ಕಣ್ಣೀರು ಹಾಕಿದ್ದಾರೆ.
ರಾಧಿಕಾ ಮರ್ಚೆಂಟ್ ಅವರೊಂದಿಗಿನ ವಿವಾಹದ ಮೊದಲು ಗುಜರಾತ್ನ ಜಾಮ್ನಗರದಲ್ಲಿ ಸಮಾರಂಭ ಆಯೋಜಿಸಲು ಅವಿರತವಾಗಿ ಶ್ರಮಿಸಿದ್ದಕ್ಕಾಗಿ ಅನಂತ್ ಅಂಬಾನಿ ಅವರ ತಾಯಿ ನೀತಾ ಅಂಬಾನಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ‘ಇದನ್ನೆಲ್ಲ ನನ್ನ ಅಮ್ಮನೇ ಸೃಷ್ಟಿಸಿದ್ದೇ ಹೊರತು ಬೇರೆ ಯಾರೂ ಅಲ್ಲ. ನನ್ನ ತಾಯಿ ಕಳೆದ 4 ತಿಂಗಳಿನಿಂದ ಮನೆಯ ಹೊರಗೆ ಇದ್ದು, 18-19 ಗಂಟೆಗಳ ಕಾಲ ಕೆಲಸ ಮಾಡಿದ್ದಾರೆ. ನಾನು ಅಮ್ಮನಿಗೆ ತುಂಬಾ ಕೃತಜ್ಞನಾಗಿದ್ದೇನೆ,’ ಎಂದಿದ್ದಾರೆ.
‘ರಾಧಿಕಾ ನನಗೆ ಹೇಗೆ ಸಿಕ್ಕಳೋ ಗೊತ್ತಿಲ್ಲ. ಆದರೆ, ಆಕೆ ನನಗೆ ಸಿಕ್ಕಿದ್ದು ನನ್ನ ಅದೃಷ್ಟವಾಗಿದೆ. ಪ್ರತಿದಿನ ಆಕೆಯ ಮೇಲೆ ನನ್ನ ಪ್ರೀತಿ ಹೆಚ್ಚುತ್ತಲೇ ಇದೆ. ರಾಧಿಕಾಳನ್ನು ನೋಡಿದಾಗ ಎದೆಯಲ್ಲಿ ಸುನಾಮಿ ಉಂಟಾಗುತ್ತದೆ’ ಎಂದು ಅನಂತ್ ಹೇಳಿದ್ದಾರೆ.
ಮೂರು ದಿನಗಳ ಮುಖ್ಯ ಕಾರ್ಯಕ್ರಮಕ್ಕಾಗಿ, ವಿಶ್ವದ ಕೆಲವು ಶ್ರೀಮಂತ ವ್ಯಕ್ತಿಗಳು ಸೇರಿದಂತೆ 1,000 ಕ್ಕೂ ಹೆಚ್ಚು ಅತಿಥಿಗಳು ಹಾಜರಾಗಿದ್ದಾರೆ. ಬಿಲ್ ಗೇಟ್ಸ್, ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್, ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಅಮೀರ್ ಖಾನ್, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಸೇರಿದಂತೆ ಸಾಕಷ್ಟು ನಟ, ನಟಿಯರು,ಕ್ರಿಕೆಟ್ ತಾರೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.