ಯಾದಗಿರಿ: ಹೆಂಡತಿ ಮೇಲೆ ಸಂಶಯಪಟ್ಟ ಗಂಡನೋರ್ವ ಸ್ಕ್ಯಾನಿಂಗ್ ಸೆಂಟರ್ ಕೆಲಸ ಮಾಡ್ತಿದ್ದವನ ಮೇಲೆ ಅನುಮಾನ ಪಟ್ಟು ಹತ್ಯೆಗೆ ಸುಪಾರಿ ನೀಡಿದ್ದ ಆದ್ರೆ ಹತ್ಯೆಗೂ ಮುನ್ನವೇ ಸುಪಾರಿ ಹಂತಕನ ಜೊತೆ ತಾನು ಸಹ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಹೌದು ಯಾದಗಿರಿ ನಗರ ಪೊಲೀಸ್ ಠಾಣೆ ಪೊಲೀಸರು ಎಚ್ಚೆತ್ತುಕೊಂಡು ಕೊಲೆಗೆ ಸಂಚು ಹಾಕಿ ಕುಳಿತಿದ್ದ ಇಬ್ಬರನ್ನು ಬಂಧಿಸಿದ ಪರಿಣಾಮ ಯಾದಗಿರಿ ನಗರ ಪೊಲೀಸ್ ಠಾಣೆ ಪಿಎಸಐ ದೇವೆಂದ್ರರೆಡ್ಡಿ ಹಾಗೂ ನೇತೃತ್ವದ ತಂಡ ಒರ್ವನ ಪ್ರಾಣ ಕಾಪಾಡಿದಂತಾಗಿದೆ ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.
ಘಟನೆ ವಿವರ: ಯಾದಗಿರಿ ತಾಲೂಕಿನ ಮುದ್ನಾಳ್ ತಾಂಡಾ ಗ್ರಾಮದ ನಾನ್ಯಾ ನಾಯಕ್ ಎಂಬಾತ ಕಳೆದ ಎಂಟು ತಿಂಗಳ ಹಿಂದೆ ತನ್ನ ಹೆಂಡತಿಯನ್ನು ತಪಾಸಣೆಗಾಗಿ ಯಾದಗಿರಿ ನಗರದ ಶಿವಸಾಯಿ ಸ್ಕ್ಯಾನ್ ಸೆಂಟರ್ ಗೆ ಕರೆದುಕೊಂಡು ಹೋಗಿದ್ದ ಸ್ಕ್ಯಾನ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ ಸುರೇಶ ಎಂಬಾತ ನಾನ್ಯಾ ನಾಯಕನ ಹೆಂಡತಿಯನ್ನ ಸ್ಕ್ಯಾನಿಂಗ್ ಗಾಗಿ ಸ್ಕ್ಯಾನ್ ಸೆಂಟರ್ ಒಳಗಡೆ ತಪಾಸಣೆಗಾಗಿ ಕರೆದುಕೊಂಡು ಹೋಗಿ 15 ನಿಮಿಷಗಳ ಕಾಲ ತಪಾಸಣೆ ಮಾಡಿದ್ದಾನೆ.
ಇದರಿಂದ ಸಂಶಯಗೊಂಡ ಗಂಡ ನಾನ್ಯಾ ನಾಯಕ್ ತನ್ನ ಹೆಂಡತಿ ಇಷ್ಟು ಸಮಯ ಒಳಗಡೆ ಇರುವುದಕ್ಕೆ ಸುರೇಶನ ಮೇಲೆ ಸಂಶಯ ಪಟ್ಟಿದ್ದಾನೆ ಇದೇ ಕಾರಣಕ್ಕೆ ಸುರೇಶನನ್ನ ಕೊಲ್ಲಲು ಕಳೆದ ಎಂಟು ತಿಂಗಳಿಂದ ಪರಿತಪಿಸುತ್ತಿದ್ದ ನಾನ್ಯಾನಾಯಕ್ ಬೆಂಗಳೂರಿನಲ್ಲಿದ್ದ ತನ್ನ ಪರಿಚಯಸ್ಥನಿಗೆ ಸ್ಕ್ಯಾನ್ ಸೆಂಟರ್ ನಲ್ಲಿ ಕೆಲಸ ಮಾಡುವ ಸುರೇಶನ ಹತ್ಯೆಗೆ 50 ಸಾವಿರ ರೂಪಾಯಿ ಹಣ ಹಾಗೂ ಬಂಗಾರದ ಉಂಗುರ ನೀಡಿ ಬೆಂಗಳೂರಿನವನಿಗೆ ಹತ್ಯೆಯ ಸುಪಾರಿ ನೀಡಿದ್ದಾನೆ.
ಅದರಂತೆ ಸುಪಾರಿ ಹಂತಕ ಪುಣೆಯಲ್ಲಿ ಕಂಟ್ರಿ ಪಿಸ್ತೂಲ್, ಚಾಕು, ಪಂಚ ಖರೀದಿಸಿ ಸುರೇಶನನ್ನ ಹತ್ಯೆ ಮಾಡಲು 2023ರ ಏಪ್ರಿಲ್ 20ರಂದು ಯಾದಗಿರಿ ನಗರದ ಲಾಡ್ಜ್ ಹೊಂದರಲ್ಲಿ ಹೊಂಚು ಹಾಕಿ ಕುಳಿತಿದ್ದಾರೆ.
ಚುನಾವಣಾ ಹಿನ್ನೆಲೆ ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ವೇಳೆ ಯಾದಗಿರಿ ನಗರ ಠಾಣೆ ಪಿಎಸಐ ದೇವೆಂದ್ರರೆಡ್ಡಿ ಹಾಗೂ ಸಿಬ್ಬಂದಿಗಳು ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಬೆಂಗಳೂರಿನ ವ್ಯಕ್ತಿ ವಿಚಾರಣೆ ನಡೆಸಿದಾಗ ತೊದಲಿದ್ದಾನೆ. ಇದನ್ನ ಗಮನಿಸಿದ ಪಿಎಸಐ ಆರೋಪಿ ಉಳಿದುಕೊಂಡಿದ್ದ ಲಾಡ್ಜ್ ಗೆ ಕರೆದುಕೊಂಡು ಹೋಗಿ ತಪಾಸಣೆ ನಡೆಸಿದಾಗ ರೂಂನಲ್ಲಿ ಕಂಟ್ರಿ ಪಿಸ್ತೂಲ್, 3 ಜೀವಂತ ಗುಂಡುಗಳು, ಬಟನ್ ಚಾಕು, ಪಂಚ್ ಪತ್ತೆಯಾಗಿವೆ.
ಇದನ್ನ ವಶಪಡಿಸಿಕೊಂಡು ಆರೋಪಿ ಸುಪಾರಿ ಹಂತಕನನ್ನ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಹತ್ಯೆಗೆ ಸುಪಾರಿ ನೀಡಿರುವ ವಿಷಯ ಬೆಳಕಿಗೆ ಬಂದಿದೆ. ನಂತರ ಸುಪಾರಿ ನೀಡಿದ ನಾನ್ಯಾ ನಾಯಕ್ ನನ್ನ ಹಾಗೂ ಹತ್ಯೆಗೆ ಸುಪಾರಿ ಪಡೆದವನನ್ನ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.ನಗರ ಠಾಣೆ ಸಿಪಿಐ ಸುನೀಲ ಮೂಲಿಮನಿ, ಪಿಎಸ್ಐ ದೇವಿಂದ್ರರಡ್ಡಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ತಂಡದ ಕಾರ್ಯಕ್ಕೆ ಯಾದಗಿರಿ ಎಸ್ಪಿ ಡಾ. ಸಿ.ಬಿ. ವೇದಮೂರ್ತಿ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.