ಪ್ರವಾಹದಿಂದಾಗಿ ಆಂಧ್ರ ಮತ್ತು ತೆಲಂಗಾಣದಲ್ಲಿ ಜನಜೀವನ ಅಸ್ತವ್ಯಸ್ತ ಆಗಿದೆ. ಹೀಗಾಗಿ ಅನೇಕ ಸೆಲೆಬ್ರಿಟಿಗಳು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಈಗಾಗಲೇ ಚಿರಂಜೀವಿ, ರಾಮ್ ಚರಣ್, ಪ್ರಭಾಸ್, ಅಲ್ಲು ಅರ್ಜುನ್, ನಂದಮೂರಿ ಬಾಲಕೃಷ್ಣ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕೋಟ್ಯಂತರ ರೂಪಾಯಿ ದೇಣಿಗೆ ನೀಡಿದ್ದಾರೆ. ಇದೀಗ ಟಾಲಿವುಡ್ ನಟ, ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವರ್ ಸ್ಟಾರ್ ಪವನ್ ಕಲ್ಯಾಣ್ 6 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ಮೊದಲು ಪವನ್ ಕಲ್ಯಾಣ್ ಅವರು ಆಂಧ್ರ ಮತ್ತು ತೆಲಂಗಾಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ ಒಂದು ಕೋಟಿ ರೂಪಾಯಿ ನೀಡುವುದಾಗಿ ತಿಳಿಸಿದರು. ಆ ನಂತರ ಅವರು ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿ, ಈ ಹಣ ಸಾಕಾಗುವುದಿಲ್ಲ ಎಂದು ಮತ್ತೆ 4 ಕೋಟಿ ರೂಪಾಯಿ ನೀಡುವುದಾಗಿ ಪವನ್ ಕಲ್ಯಾಣ್ ಘೋಷಿಸಿದ್ದಾರೆ.
ಆಂಧ್ರ ಪ್ರದೇಶದಲ್ಲಿ ಪ್ರವಾಹಕ್ಕೆ ಸಿಲುಕಿದ 400 ಪಂಚಾಯತ್ ಕ್ಷೇತ್ರಗಳಲ್ಲಿ ಪುನರ್ವಸತಿ ಕಲ್ಪಿಸುವ ಸಲುವಾಗಿ ಪವನ್ ಕಲ್ಯಾಣ್ ನೀಡಿದ 4 ಕೋಟಿ ರೂಪಾಯಿ ಬಳಕೆ ಆಗಲಿದೆ. ‘ಪ್ರವಾಹದಿಂದ ಆಗಿರುವ ಹಾನಿ ಗಮನಿಸಿದರೆ 1 ಕೋಟಿ ರೂಪಾಯಿಯಿಂದ ಏನೂ ಸಾಧ್ಯವಾಗುವುದಿಲ್ಲ. ಹಾಗಾಗಿ ಮತ್ತೆ 4 ಕೋಟಿ ರೂಪಾಯಿ ನೀಡಲಿದ್ದೇನೆ’ ಎಂದು ಪವನ್ ಕಲ್ಯಾಣ್ ತಿಳಿಸಿದ್ದಾರೆ.
‘ನಮ್ಮ ಪಕ್ಕದ ತೆಲಂಗಾಣ ಕೂಡ ಪ್ರವಾಹದಲ್ಲಿ ಸಿಲುಕಿದೆ. ಹಾಗಾಗಿ ತೆಲಂಗಾಣ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ನೀಡುತ್ತಿದ್ದೇನೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರನ್ನು ನಾನು ನೇರವಾಗಿ ಭೇಟಿ ಮಾಡಿ ಹಣ ನೀಡುತ್ತೇನೆ. ಸಿನಿಮಾ ಸೆಲೆಬ್ರಿಟಿಗಳು ಕೂಡ ಈ ಸಮಯದಲ್ಲಿ ಮಾನವೀಯತೆ ತೋರಿಸುತ್ತಿದ್ದಾರೆ’ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.