ಹೊಸದಿಲ್ಲಿ: ಕೇಂದ್ರದ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಎಕೆ ಆಂಟನಿ ಅವರ ಮಗ ಅನಿಲ್ ಆಂಟನಿ ಅವರು ಗುರುವಾರ ಬಿಜೆಪಿ ಸೇರ್ಪಡೆಯಾದರು. ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾದ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರದ ವಿಚಾರವಾಗಿ ಪಕ್ಷದ ನಿಲುವನ್ನು ಟೀಕಿಸಿದ್ದ ಅನಿಲ್ ಆಂಟನಿ ಅವರು, ಜನವರಿಯಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು. ಅಂದಿನಿಂದಲೂ ಅವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ನಿರೀಕ್ಷೆ ವ್ಯಕ್ತವಾಗಿತ್ತು.
ಅನಿಲ್ ಆಂಟನಿ ಅವರು ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ವಿ ಮುರಳೀಧರನ್ ಅವರ ಸಮ್ಮುಖದಲ್ಲಿ ಕಮಲ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾದರು. ಅನಿಲ್ ಆಂಟನಿ ಅವರ ಪಕ್ಷ ಸೇರ್ಪಡೆಯಿಂದ ಕೇರಳದಲ್ಲಿ ಕಮಲ ಅರಳಿಸಲು ಪ್ರಯತ್ನಿಸುತ್ತಿರುವ ಕೇಸರಿ ಪಾಳೆಯಕ್ಕೆ ಬಲ ಬಂದಂತಾಗಿದೆ. ಕಮಲ ಕೈ ಹಿಡಿಯುತ್ತಿದ್ದಂತೆಯೇ ಅನಿಲ್ ಅವರು ತಮ್ಮ ಮಾಜಿ ಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ತಾವು ಮಾಡುವ ಕೆಲಸವು ‘ಕುಟುಂಬ’ ಒಂದಕ್ಕಾಗಿ ಮಾಡುವ ಕೆಲಸ ಎಂದು ನಂಬಿದ್ದಾರೆ. ಆದರೆ ನಾನು ದೇಶಕ್ಕಾಗಿ ಕೆಲಸ ಮಾಡುತ್ತೇನೆ. ರಾಷ್ಟ್ರ ನಿರ್ಮಾಣ ಹಾಗೂ ರಾಷ್ಟ್ರೀಯ ಸಮಗ್ರತೆಯ ಕಡೆಗಿನ ಪ್ರಧಾನಿ ಮೋದಿ ಅವರ ದೃಷ್ಟಿಕೋನಕ್ಕೆ ಕೊಡುಗೆ ಸಲ್ಲಿಸುವುದು ನನ್ನ ಕರ್ತವ್ಯ ಎಂದು ಅನಿಲ್ ಆಂಟನಿ ಹೇಳಿದ್ದಾರೆ.
ತಂದೆ ಎಕೆ ಆಂಟನಿ ಅವರ ಕುರಿತು ಮಾತನಾಡಿದ ಅನಿಲ್, “ನಮ್ಮ ನಡುವೆ ಉತ್ತಮ ಸಂಬಂಧವಿದೆ. ಅದರೆ ಇದು ವಿಭಿನ್ನ ಅಭಿಪ್ರಾಯ ಹಾಗೂ ಸಿದ್ಧಾಂತದ ವಿಚಾರವಾಗಿದೆ. ನಾನು ಸರಿಯಾದ ಹೆಜ್ಜೆ ಅನುಸರಿಸಿದ್ದೇನೆ. ನನ್ನ ತಂದೆ ಕಡೆಗಿನ ಪ್ರೀತಿ ಎಂದಿಗೂ ಹಾಗೆಯೇ ಉಳಿಯಲಿದೆ” ಎಂದಿದ್ದಾರೆ.
“ಅನಿಲ್ ಆಂಟನಿ ಅವರು ಬಹುಮುಖಿ ವ್ಯಕ್ತಿತ್ವದ ಪ್ರತಿಭೆ. ಅನಿಲ್ ಆಂಟನಿ ಅವರ ಸಾಮರ್ಥ್ಯಗಳನ್ನು ನೋಡಿದಾಗ ನನಗೆ ಬಹಳ ಮೆಚ್ಚುಗೆಯಾಗಿದೆ” ಎಂದು ಪಿಯೂಷ್ ಗೋಯಲ್ ಹೇಳಿದರು. “ಅವರ ದೃಷ್ಟಿಕೋನಗಳು ಸುಸ್ಥಿರ ಅಭಿವೃದ್ದಿ ಕಡೆಗಿನ ಪ್ರಧಾನಿ ಮೋದಿ ಅವರ ಚಿಂತನೆಗಳನ್ನೇ ಪ್ರತಿಫಲಿಸುತ್ತವೆ. ಅವರು ಪಕ್ಷದಲ್ಲಿ ಸಕ್ರಿಯವಾದ ಪಾತ್ರ ವಹಿಸುತ್ತಾರೆ ಮತ್ತು ದಕ್ಷಿಣ ಭಾರತದಲ್ಲಿ ಬಿಜೆಪಿ ಹೆಜ್ಜೆಗುರುತುಗಳನ್ನು ಬೆಳೆಸಲು ಸಹಾಯ ಮಾಡುವ ವಿಶ್ವಾಸವಿದೆ” ಎಂದರು.
ಬಿಬಿಸಿ ಸಾಕ್ಷ್ಯಚಿತ್ರದ ವಿರುದ್ಧ ಕಿಡಿ
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಅತ್ಯಂತ ವಿಶ್ವಾಸಾರ್ಹ ನಿಷ್ಠರಲ್ಲಿ ಒಬ್ಬರಾಗಿರುವ ಎಕೆ ಆಂಟನಿ ಅವರು ಮಗನ ನಡೆ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಕೇರಳ ಕಾಂಗ್ರೆಸ್ ನಾಯಕರಾಗಿದ್ದ ಅನಿಲ್ ಆಂಟನಿ, 2002ರ ಗುಜರಾತ್ ಗಲಭೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾದ ಬಿಬಿಸಿಯ ವಿವಾದಾತ್ಮಕ ಸಾಕ್ಷ್ಯಚಿತ್ರದ ವಿರುದ್ಧ ಹರಿಹಾಯ್ದಿದ್ದರು. ಈ ಸಾಕ್ಷ್ಯಚಿತ್ರವನ್ನು ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧದ ಅಸ್ತ್ರವಾಗಿ ಕಾಂಗ್ರೆಸ್ ಬಳಸಿಕೊಳ್ಳುತ್ತಿದ್ದಾಗ, ಭಾರತದ ವಿರುದ್ಧ ಪೂರ್ವಗ್ರಹದ ದುರುದ್ದೇಶಪೂರ್ವಕ ಸಾಕ್ಷ್ಯಚಿತ್ರ ನಿರ್ಮಿಸಲಾಗಿದೆ ಎಂದು ಅನಿಲ್ ಆಂಟನಿ ಕಿಡಿಕಾರಿದ್ದರು. ಅವರ ಟ್ವೀಟ್ ಕಾಂಗ್ರೆಸ್ನಲ್ಲಿ ಅಸಮಾಧಾನ ಮೂಡಿಸಿತ್ತು. ತಮ್ಮ ಟ್ವೀಟ್ ಅಳಿಸಲು ನಿರಾಕರಿಸಿದ್ದ ಅವರು, ಪಕ್ಷದ ಸಾಮಾಜಿಕ ಮಾಧ್ಯಮದ ಘಟಕಕ್ಕೆ ರಾಜೀನಾಮೆ ನೀಡಿದ್ದರು.ಅ