ಪೇಶಾವರ್: ಪೇಸ್ ಬುಕ್ ನಲ್ಲಿ ಪರಿಚಯವಾದ ಸ್ನೇಹಿತನನ್ನು ಭೇಟಿಯಾಗಲು ಕಾನೂನುಬದ್ಧವಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದ ವಿವಾಹಿತ ಭಾರತೀಯ ಮಹಿಳೆ ಆಗಸ್ಟ್ 20ರಂದು ಭಾರತಕ್ಕೆ ಮರಳಲಿದ್ದಾಳೆ. ಆಕೆಯನ್ನು ಮದುವೆಯಾಗುವ ಯಾವುದೇ ಯೋಚನೆ ಇಲ್ಲ ಎಂದು ಪಾಕ್ ವ್ಯಕ್ತಿ ನುಸ್ರುಲ್ಲಾ ತಿಳಿಸಿದ್ದಾರೆ.
ಭಾರತದ ಮಹಿಳೆ ಜೊತೆಗಿನ ಪ್ರೀತಿ ಪ್ರೇಮದ ಆಯಾಮವನ್ನು ತಳ್ಳಿ ಹಾಕಿರುವ ನುಸ್ರುಲ್ಲಾ, ಅಂಜುಳ ವೀಸಾ ಅವಧಿ ಮುಗಿದ ನಂತರ ಆಗಸ್ಟ್ 20ರಂದು ಭಾರತಕ್ಕೆ ಮರಳುತ್ತಾಳೆ. ಅಂಜು ನನ್ನ ಕುಟುಂಬದ ಇತರ ಮಹಿಳಾ ಸದಸ್ಯರೊಂದಿಗೆ ಮನೆಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ತಂಗಿದ್ದಾಳೆ ಎಂದಿದ್ದಾರೆ.
ಉತ್ತರ ಪ್ರದೇಶದ ಕೈಲೋರ್ ಗ್ರಾಮದಲ್ಲಿ ಜನಿಸಿ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದ 34 ವರ್ಷದ ಅಂಜು ತನ್ನ 29 ವರ್ಷದ ಪಾಕಿಸ್ತಾನಿ ಸ್ನೇಹಿತ ನಸ್ರುಲ್ಲಾ ಜೊತೆ 2019ರಲ್ಲಿ ಪೇಸ್ ಬುಕ್ ಮೂಲಕ ಸ್ನೇಹಿತರಾಗಿದ್ದರು. ಆತನನ್ನು ಭೇಟಿಯಾಗಲು ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದ ಅಪ್ಪರ್ ದಿರ್ ಜಿಲ್ಲೆಗೆ ಅಂಜು ತೆರಳಿದ್ದಳು.
ಅಂಜು ಆರಂಭದಲ್ಲಿ ಪೊಲೀಸರ ವಶದಲ್ಲಿದ್ದರು, ಆದರೆ ಅವರ ಪ್ರಯಾಣ ದಾಖಲೆಗಳನ್ನು ಜಿಲ್ಲಾ ಪೊಲೀಸರು ಪರಿಶೀಲಿಸಿದ ನಂತರ ಬಿಡುಗಡೆ ಮಾಡಿದ್ದರು. ಎಲ್ಲಾ ಪ್ರಯಾಣದ ದಾಖಲೆಗಳು ಸರಿಯಾಗಿವೆ ಎಂದು ಕಂಡುಬಂದ ನಂತರ ಆಕೆಯ ಭೇಟಿಗೆ ಅನುಮತಿ ನೀಡಲಾಗಿದೆ. ದೇಶಕ್ಕೆ ಕೆಟ್ಟ ಹೆಸರು ತರುವಂತಹ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಅವರಿಗೆ ಭದ್ರತೆಯನ್ನು ಒದಗಿಸಲಾಗಿದೆ ಎಂದು ಮೂಲವೊಂದು ಪಿಟಿಐಗೆ ತಿಳಿಸಿದೆ.