ಬೆಂಗಳೂರು ;- ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಕೂಸಾದ ಅನ್ನಭಾಗ್ಯ ಕಾರ್ಯಕ್ರಮಕ್ಕೆ ಚಾಲನೆ ದೊರೆತ ನಂತರ ಇದುವರೆಗೆ ರಾಜ್ಯ ಸರ್ಕಾರ 24 ಜಿಲ್ಲೆಯ 78.4 ಲಕ್ಷ ಫಲಾನುಭವಿಗಳಿಗೆ 456.73 ಕೋಟಿ ರೂ. ಜಮಾ ಮಾಡಿದೆ.
ಇನ್ನುಳಿದ ಏಳು ಜಿಲ್ಲೆಗಳಲ್ಲಿ ಫಲಾನುಭವಿಗಳಿಗೆ ನೇರ ಲಾಭ ವರ್ಗಾವಣೆ (DBT) ಪ್ರಕ್ರಿಯೆಯಲ್ಲಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನೀಡಿದ ಮಾಹಿತಿ ಪ್ರಕಾರ ಒಂದು ಕಡತವು ಕೇವಲ 20,000 ನೇರ ಲಾಭ ವರ್ಗಾವಣೆಯನ್ನು ಪ್ರಕ್ರಿಯೆಗೊಳಿಸಬಹುದು. ಪ್ರತಿ ಜಿಲ್ಲೆಗೆ ಬಹು ಕಡತಗಳನ್ನು ರಚಿಸಬೇಕಾಗಿದೆ. ಇದು ಸಮಯ ತೆಗೆದುಕೊಳ್ಳುವುದರಿಂದ, ಪಾವತಿಗಳು ವಿಳಂಬವಾಗಿದೆ ಆದರೆ ಅವು ಎಂಟು ದಿನಗಳಲ್ಲಿ ಪೂರ್ಣಗೊಳ್ಳುತ್ತವೆ ಎಂದು ತಿಳಿಸಿದೆ
ಚಾಮರಾಜನಗರ, ವಿಜಯಪುರ, ಹಾಸನ, ಚಿಕ್ಕಬಳ್ಳಾಪುರ, ಉಡುಪಿ, ವಿಜಯನಗರ, ಮತ್ತು ಶಿವಮೊಗ್ಗ ಜಿಲ್ಲೆಗಳ ಫಲಾನುಭವಿ ಖಾತೆಗಳಿಗೆ ಹಣ ಜಮೆಯಾಗಬೇಕಿದೆ. ಈ ಜಿಲ್ಲೆಗಳಲ್ಲಿ ಒಟ್ಟು 18.86 ಲಕ್ಷ ಫಲಾನುಭವಿಗಳಿದ್ದಾರೆ.
ಸರ್ಕಾರವು ಪ್ರತಿ ಫಲಾನುಭವಿಗೆ ತಿಂಗಳಿಗೆ ಕೇಜಿಗೆ 34 ರೂ. ನಂತೆ ಐದು ಕೇಜಿಗೆ 170 ರೂ. ವರ್ಗಾಯಿಸುತ್ತದೆ. ಕುಟುಂಬದ ಮುಖ್ಯಸ್ಥರ ಆಧಾರ್ ಸಂಖ್ಯೆಗೆ ಲಿಂಕ್ ಮಾಡಿದ ಬ್ಯಾಂಕ್ ಖಾತೆಗೆ ಈ ಹಣ ಜಮೆಯಾಗುತ್ತದೆ. ಕೇಂದ್ರ ಸರ್ಕಾರ ಅಕ್ಕಿ ನೀಡಲು ನಿರಾಕರಿಸಿದ ನಂತರ ಸರ್ಕಾರ ಹಣ ಜಮೆಗೆ ನಿರ್ಧರಿಸಿದೆ.