ಬೆಂಗಳೂರು ;- ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ’ ಹಾಗೂ ‘ಗೃಹಜ್ಯೋತಿ’ ಯೋಜನೆಗಳನ್ನು ಇಂದಿನಿಂದ ರಾಜ್ಯದಾದ್ಯಂತ ಅನುಷ್ಠಾನಕ್ಕೆ ತರಲು ಸಿದ್ಧತೆ ಮಾಡಲಾಗಿದೆ.
ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಗಳು ಸರ್ಕಾರ ರಚನೆಯಾಗಿ ಒಂದು ತಿಂಗಳು ಕಳೆಯುವಷ್ಟರಲ್ಲೇ ಅನುಷ್ಠಾನಕ್ಕೆ ಬರುತ್ತಿರುವುದು ವಿಶೇಷ. ಹಾಗೆಯೇ ಯೋಜನೆಗೆ ಎದುರಾದ ಅನಿರೀಕ್ಷಿತ ಸವಾಲುಗಳನ್ನು ಒಂದೊಂದಾಗಿ ಬದಿಗೆ ಸರಿಸಿ ಜನರಲ್ಲಿ ವಿಶ್ವಾಸ ತುಂಬಲು ಸರ್ಕಾರ ಪ್ರಯತ್ನ ನಡೆಸಿರುವುದೂ ಸ್ಪಷ್ಟವಾಗಿದೆ.
ಕೇಂದ್ರ ಸರ್ಕಾರ ನೀಡುವ ಐದು ಕೆಜಿ ಅಕ್ಕಿಯ ಹೊರತಾಗಿ ರಾಜ್ಯ ಸರ್ಕಾರದಿಂದ ಐದು ಕೆಜಿ ಅಕ್ಕಿಯ ಬದಲು ತಕ್ಷಣಕ್ಕೆ ಹಣ ನೀಡಲು ಉದ್ದೇಶಿಸಿದ್ದು, ಜುಲೈ 1ರಿಂದಲೇ ಅನ್ವಯವಾಗುವಂತೆ ಬಿಪಿಎಲ್ ಕಾರ್ಡ್ದಾರರ ಖಾತೆಗೆ ಹಣ ಜಮಾ ಆಗಲಿದೆ. ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಮಾತು ಕೊಟ್ಟಂತೆ ಜುಲೈ 1ರಿಂದ ಯೋಜನೆ ಜಾರಿಯಾಗಲಿದೆ. ಪಡಿತರ ಚೀಟಿ ಹೊಂದಿರುವವರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಲಿದೆ. ಯಾರು ಖಾತೆ ತೆರೆದಿಲ್ಲವೋ ಅಂತಹವರು ಬ್ಯಾಂಕ್ ಖಾತೆ ತೆರೆಯಬೇಕಾಗುತ್ತದೆ ಎಂದಿದ್ದಾರೆ.