ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ಇತ್ತೀಚೆಗೆ ಗಿನ್ನೆಸ್ ಪುಸ್ತಕದಲ್ಲಿ ಸೇರಿಕೊಂಡಿದ್ದಾರೆ. ಚಿರಂಜೀವಿ ಅವರನ್ನು ಭಾರತೀಯ ಚಿತ್ರರಂಗದ ಅತ್ಯಂತ ಕ್ರಿಯಾತ್ಮಕ ಚಲನಚಿತ್ರ ತಾರೆ ಎಂಬ ಬಿರುದಿನೊಂದಿಗೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಗೌರವಿಸಿದೆ. ಅಣ್ಣನಿಗೆ ಸಿಕ್ಕ ಈ ಗೌರವದ ಬಗ್ಗೆ ಸಹೋದರ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಸಂತೋಷ ವ್ಯಕ್ತಪಡಿಸಿದ್ದಾರೆ.
ದಾಖಲೆ ಎಂಬುದು ಒಬ್ಬರ ಪ್ರಯಾಣದ ಸಾಕ್ಷಿಯಾಗಿದೆ. ಅವರ ಏನನ್ನು ಸಾಧಿಸಿದ್ದಾರೆ ಎಂಬುದಕ್ಕೆ ಗುರುತಾಗಿದೆ ಎಂದು ತಿಳಿಸಿದ್ದು, ಈ ಸಾಧನೆಗೆ ಸಹೋದರನನ್ನು ನಾನು ಅಭಿನಂದಿಸಿದ್ದೇನೆ ಎಂದು ತಿಳಿಸಿದ್ದಾರೆ. ಮಂಗಳಗಿರಿಯ ಜನಸೇನಾ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಪವನ್ ಕಲ್ಯಾಣ್ ಅವರು ತಮ್ಮ ನಿವಾಸದಲ್ಲಿ ದೊಡ್ಡ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಇದ್ದಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ
ನಟ ಹಾಗೂ ರಾಜಕಾರಣಿ ಪವನ್ ಕಲ್ಯಾಣ್ ತಮ್ಮ ಅಣ್ಣನ ಸಾಧನೆ, ಸಮಾಜಕ್ಕೆ ಏನಾದರೂ ಕೊಡುಗೆ ನೀಡಲು ಬಯಸುವ ಅನೇಕರಿಗೆ ಸ್ಫೂರ್ತಿ ನೀಡುತ್ತದೆ ಹಾಗೂ ಯುವಕರಿಗೆ ಸ್ಫೂರ್ತಿದಾಯಕವಾಗಿದೆ ಎಂದಿದ್ದಾರೆ. ಅವರಿಗೆ ನೀಡಿದ ಪ್ರಶಸ್ತಿಯು ಹೊಸ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ನನ್ನ ಸಹೋದರ ಈ ದಾಖಲೆಯನ್ನು ಸಾಧಿಸಿರುವುದು ನನಗೆ ಅಪಾರ ಹರ್ಷ ತಂದಿದೆ. ಅವರು ನನಗೆ ಸಹೋದರ ಮಾತ್ರವಲ್ಲ, ತಂದೆಯೂ ಹೌದು ಎಂದು ಪವನ್ ಭಾವುಕರಾಗಿದ್ದಾರೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ್ದ ನಟ ಚಿರಂಜೀವಿ, ಈ ಕ್ಷಣ ಅವಿಸ್ಮರಣೀಯ. ನಾನು ಗಿನ್ನೆಸ್ ವಿಶ್ವ ದಾಖಲೆಗಳನ್ನು ಪಡೆಯುತ್ತೇನೆ ಎಂದು ಎಂದಿಗೂ ನಿರೀಕ್ಷಿಸಿರಲಿಲ್ಲ, ಆದರೆ ನನ್ನ ನೃತ್ಯಕ್ಕಾಗಿ ಗೌರವವನ್ನು ಪಡೆಯುವುದು ನಂಬಲಾಗದಂತಿದೆ. ಇಷ್ಟು ವರ್ಷಗಳ ನನ್ನ ಸಿನಿಮಾ ವೃತ್ತಿಜೀವನದಲ್ಲಿ ನೃತ್ಯ ನನ್ನ ಜೀವನದ ಭಾಗವಾಗಿದೆ ಎಂದು ಪ್ರಮಾಣಪತ್ರ ಸ್ವೀಕರಿಸಿದ ನಂತರ ಚಿರಂಜೀವಿ ತಿಳಿಸಿದ್ದಾರೆ.
ನನ್ನ ನೃತ್ಯ ಪ್ರತಿಭೆಯನ್ನು ಚಲನಚಿತ್ರಗಳಲ್ಲಿ ಪ್ರದರ್ಶಿಸಲು ನನಗೆ ಅವಕಾಶ ನೀಡಿದ ನಿರ್ದೇಶಕರು, ನಿರ್ಮಾಪಕರು, ಸಂಗೀತ ನಿರ್ದೇಶಕರು ಮತ್ತು ನೃತ್ಯ ಸಂಯೋಜಕರಿಗೆ ನಾನು ಈ ಗೌರವವನ್ನು ಸಲ್ಲಿಸುತ್ತೇನೆ ಚಿರಂಜೀವಿ ಹೇಳಿದ್ದರು.