ಮಂಡ್ಯ :- ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನನಿತ್ಯ ಒಂದಿಲ್ಲೊಂದು ಪ್ರಕರಣಗಳು ಸಂಭವಿಸುತ್ತಿದ್ದು ಶನಿವಾರವೂ ಮತ್ತೊಂದು ಪ್ರಕರಣ ನಡೆದಿದೆ. ತಾಂತ್ರಿಕ ದೋಷದಿಂದ ರೆನಾಲ್ಡ್ ಡಸ್ಟರ್ ಕಾರು ಹೊತ್ತಿ ಉರಿದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಗೌರಿಪುರ ಸರ್ವೀಸ್ ರಸ್ತೆಯಲ್ಲಿ ನಡೆದಿದೆ.
ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಪಿರಾನ್ ಎಂಬುವವರ ರೆನಾಲ್ಟ್ ಡಸ್ಟರ್ ಕಾರು ಹೊತ್ತಿ ಉರಿದಿದೆ. ತಮ್ಮ ಕುಟುಂಬದ ಜೊತೆ ಮೈಸೂರಿಗೆ ತೆರಳುತ್ತಿದ್ದಾಗ ಶ್ರೀರಂಗಪಟ್ಟಣದ ಗೌರಿಪುರ ಗೇಟ್ ಬಳಿ ಕಾರಿನ ಇಂಜಿನ್ ನಲ್ಲಿ ಹೊಗೆ ಕಾಣಿಸಿಕೊಂಡಿದೆ.
ತಕ್ಷಣವೇ ಕಾರನ್ನು ನಿಲ್ಲಿಸಿ ಕಾರಿನಲ್ಲಿದ್ದ ಎಲ್ಲರೂ ಕೆಳಗಿಳಿದಿದ್ದಾರೆ. ನೋಡು ನೋಡುತ್ತಿದ್ದಂತೆ ಕಾರಿನಲ್ಲಿ ಹೆಚ್ಚಿನ ಬೆಂಕಿ ಕಾಣಿಸಿಕೊಂಡು ಕಾರಿನ ಅರ್ಧದಷ್ಟು ಭಾಗ ಸುಟ್ಟು ಹೋಗಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಅಗಮಿಸಿ ಬೆಂಕಿ ನಂದಿಸಿದ್ದಾರೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ವರದಿ : ಗಿರೀಶ್ ರಾಜ್ ಮಂಡ್ಯ