ಖ್ಯಾತ ಕೋರಿಯೋಗ್ರಾಫರ್ ಜಾನಿ ಮಾಸ್ಟರ್ಗೆ ಪೋಕ್ಸೋ ಕೇಸ್ ಬೆನ್ನಲ್ಲೇ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಜಾನಿ ಮಾಸ್ಟರ್ ಗೆ ನೀಡಲಾಗಿದ್ದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ರದ್ದುಗೊಳಿಸಲಾಗಿದೆ.
ಇತ್ತೀಚೆಗೆ ಜಾನಿ ಮಾಸ್ಟರ್ ವಿರುದ್ಧ ತಮ್ಮ ಸಹಾಯಕ ನೃತ್ಯ ಸಂಯೋಜಕಿ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪಗಳು ಬಂದ ಹಿನ್ನೆಲೆಯಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ನಿರ್ಧಾರ ತೆಗೆದುಕೊಂಡಿದೆ. ಜಾನಿ ಮಾಸ್ಟರ್ ಅವರಿಗೆ ರಾಷ್ಟ್ರ ಪ್ರಶಸ್ತಿಯನ್ನು ರದ್ದುಗೊಳಿಸಲಾಗಿದೆ ಎಂದು ಘೋಷಿಸಿದೆ.
ಆಗಸ್ಟ್ ತಿಂಗಳಲ್ಲಿ 2022ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ತಮಿಳಿನ `ತಿರುಚಿತ್ರಂಬಲಂʼ ಚಿತ್ರದ ʻಮೇಘಂ ಕರುಕಥʼ ಹಾಡಿಗಾಗಿ ಜಾನಿ ಮಾಸ್ಟರ್ ಮತ್ತು ಸತೀಶ್ ಮಾಸ್ಟರ್ ಅವರಿಗೆ ಉತ್ತಮ ನೃತ್ಯ ಸಂಯೋಜನೆ ವಿಭಾಗದಲ್ಲಿ ಜಂಟಿಯಾಗಿ ರಾಷ್ಟ್ರ ಪ್ರಶಸ್ತಿ ಘೋಷಿಸಲಾಗಿತ್ತು. ಈ ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ಅಕ್ಟೋಬರ್ 8 ರಂದು ದೆಹಲಿಯಲ್ಲಿ ಆಯೋಜನೆಯಾಗಿದ್ದು, ರಾಷ್ಟ್ರಪತಿಗಳು ಪ್ರಶಸ್ತಿ ವಿತರಣೆ ಮಾಡಲಿದ್ದಾರೆ.
ಪ್ರಶಸ್ತಿ ಪ್ರಧಾನ ಮಾಡಲು ಎರಡು ಮೂರು ದಿನ ಭಾಕಿ ಇರುವಾಗ ಜಾನಿ ಮಾಸ್ಟರ್ ಪ್ರಶಸ್ತಿಯನ್ನು ರದ್ದುಗೊಳಿಸಲಾಗಿದೆ. ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಜಾನಿ ಮಾಸ್ಟರ್ ಜೈಲಿನಲ್ಲಿದ್ದಾರೆ. ಪೋಕ್ಸೊ ಕಾಯ್ದೆಯಡಿ ಅವರ ಮೇಲೆ ಪ್ರಕರಣ ದಾಖಲಾಗಿದೆ. ಇದು ಬಹಳ ಗಂಭೀರವಾದ ಪ್ರಕರಣ ಎಂದು ಸರ್ಕಾರ ಮತ್ತು ನ್ಯಾಯಾಲಯ ಪರಿಗಣಿಸಿ ರಾಷ್ಟ್ರ ಪ್ರಶಸ್ತಿಯನ್ನು ರದ್ದುಗೊಳಿಸಿದೆ.