16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಾಧಾರಣ ಪ್ರದರ್ಶನ ನೀಡಿದೆ. ಈವರೆಗೆ ಆಡಿದ 7 ಪಂದ್ಯಗಳಲ್ಲಿ ಸತತ ಐದು ಸೋಲಿನ ಬಳಿಕ ಬ್ಯಾಕ್ ಟು ಬ್ಯಾಕ್ ಜಯ ದಾಖಲಿಸಿದರೂ ಅಂಕಪಟ್ಟಿಯ ಕೊನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಇದೀಗ ಡೇವಿಡ್ ವಾರ್ನರ್ ಸಾರಥ್ಯದ ಡೆಲ್ಲಿ ತಂಡಕ್ಕೆ ಮತ್ತೊಂದು ತಲೆಬಿಸಿ ಎದುರಾಗಿದೆ. ಪಾರ್ಟಿ ಒಂದರಲ್ಲಿ ಮಹಿಳೆಯೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಅಸಭ್ಯವಾಗಿ ವರ್ತಿಸಿ ಸಿಕ್ಕಿಬಿದ್ದಿದ್ದಾನೆ. ಕೂಡಲೇ ಎಚ್ಚೆತ್ತುಕೊಂಡಿರುವ ಡೆಲ್ಲಿ ಫ್ರಾಂಚೈಸಿ ಹದ್ದು ಮೀರಿ ವರ್ತಿಸಿದ ಆಟಗಾರನಿಗೆ ಎಚ್ಚರಿಕೆ ರವಾನಿಸಿದೆ ಎಂದು ವರದಿಯಾಗಿದೆ.
ಡೆಲ್ಲಿ ಫ್ರಾಂಚೈಸಿ ತಂಡ ಆಟಗಾರರ ಶಿಸ್ತು ಕಾಪಾಡುವ ಸಲುವಾಗಿ ನೀತಿ ಸಂಹಿತೆ ಹೊಂದಿದೆ. ಇದನ್ನು ಉಲ್ಲಂಘಿಸಿದ ಆಟಗಾರರ ವಿರುದ್ಧ ತಂಡ ದಂಡ ವಿಧಿಸಬಹುದು. ಆಟಗಾರನ ಜೊತೆಗಿನ ಒಪ್ಪಂದವನ್ನೂ ರದ್ದು ಪಡಿಸಬಹುದಾಗಿದೆ. ಇಂಡಿಯನ್ ಎಕ್ಸ್ಪ್ರೆಸ್ ಈ ವರದಿ ಮಾಡಿದ್ದು, ನಿಯಮ ಉಲ್ಲಂಘನೆ ಮಾಡಿರುವ ಆಟಗಾರ ಯಾರು ಎಂದು ಎಲ್ಲಿಯೂ ವಿವರಿಸಲಾಗಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ತನ್ನ ಕೊನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಎದುರು 7 ರನ್ಗಳ ಜಯ ದಾಖಲಿಸಿತು. ಬಳಿಕ ನಡೆದ ಪಾರ್ಟಿ ಒಂದರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ವರದಿ ಪ್ರಕಾರ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಆಟಗಾರರ ಜೊತೆಗೆ ಅವರ ಕುಟುಂಬದವರು ಪ್ರಯಾಣಿಸದಂತೆ ನಿಷೇಧ ಹೇರಿದೆ. ಒಂದು ವೇಳೆ ಪ್ರಯಾಣಿಸಲು ಬಯಸಿದರೆ, ಕುಟುಂಬದವರ ಪ್ರಯಾಣ ಮತ್ತು ವಾಸ್ಥವ್ಯದ ವೆಚ್ಚವನ್ನು ಆಟಗಾರರೇ ಭರಿಸಬೇಕು. ಅಂದಹಾಗೆ ಉಳಿದ ತಂಡಗಳು ಆಟಗಾರರ ಜೊತೆಗೆ ಕುಟುಂಬದವರ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟಿದೆ.
ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 29ರಂದು ಆಡಲಿದ್ದು, ತಾಯ್ನಾಡಿನಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧವೂ ಪೈಪೋಟಿ ನಡೆಸಲಿದೆ. ಡೆಲ್ಲಿ ಕ್ಯಾಪಿಟಲ್ಸ್ ತನ್ನ ಪಾಲಿನ ಉಳಿದ 7 ಪಂದ್ಯಗಳಲ್ಲಿ ಕನಿಷ್ಠ 6 ಜಯ ದಾಖಲಿಸಿದರೆ ಮಾತ್ರವೇ ಮುಂದಿನ ಹಂತಕ್ಕೇರುವ ಅವಕಾಶ ಸಿಗಲಿದೆ.