ನವದೆಹಲಿ: ಇತ್ತೀಚೆಗೆ ವಿಮಾನಗಳಲ್ಲಿ ಮೂತ್ರ ವಿಸರ್ಜನೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಏರ್ ಇಂಡಿಯಾ, ಗೋ ಫಸ್ಟ್ ಬಳಿಕ ಇದೀಗ ಅಮೆರಿಕನ್ ಏರ್ಲೈನ್ಸ್ (American Airlines) ವಿಮಾನದಲ್ಲೂ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ನ್ಯೂಯಾರ್ಕ್ನಿಂದ ದೆಹಲಿಗೆ ಬರುತ್ತಿದ್ದ ಅಮೇರಿಕನ್ ಏರ್ಲೈನ್ಸ್ ವಿಮಾನದಲ್ಲಿ ಕುಡಿದ ಅಮಲಿನಲ್ಲಿ ಪ್ರಯಾಣಿಕನೊಬ್ಬ ಸಹ ಪ್ರಯಾಣಿಕನ (Flight Passenger) ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ವಿಮಾನ ದೆಹಲಿಗೆ (Delhi) ಬಂದಿಳಿದ ನಂತರ ಆರೋಪಿಯನ್ನ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಎಎ292 ಅಮೆರಿಕನ್ ಏರ್ಲೈನ್ಸ್ ವಿಮಾನವು ಶುಕ್ರವಾರ ರಾತ್ರಿ 9:16ಕ್ಕೆ ನ್ಯೂಯಾರ್ಕ್ನಿಂದ ಹೊರಟು, 14 ಗಂಟೆ 26 ನಿಮಿಷಗಳ ನಂತರ (ಶನಿವಾರ ರಾತ್ರಿ 10:12ಕ್ಕೆ) ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (IGIA) ಬಂದಿಳಿಯಿತು. ಆರೋಪಿಯು ಅಮೇರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದು, ಕುಡಿದ ಅಮಲಿನಲ್ಲಿ ಮಲಗಿದ್ದಾಗ ಮೂತ್ರ ವಿಸರ್ಜನೆ ಮಾಡಿದ್ದಾನೆ. ಬಳಿಕ ಇದು ಹೇಗೋ ಸೋರಿಕೆಯಾಗಿದೆ ಎಂದು ಕ್ಷಮೆಯಾಚಿಸಿದ್ದಾನೆ. ಆದರೂ ಸಹ ಪ್ರಯಾಣಿಕ ಏರ್ಲೈನ್ ಸಿಬ್ಬಂದಿಗೆ ದೂರು ನೀಡಿದ್ದರಿಂದಾಗಿ ಆತನನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ.