ಪಾಕಿಸ್ತಾನದಲ್ಲಿ ಈ ವರ್ಷದ ಐದನೇ ಪೋಲಿಯೊ ಪ್ರಕರಣ ದೃಢಪಟ್ಟಿದೆ. ಪೋಲಿಯೊ ಪೀಡಿತ ಮಗುವೊಂದು ಮೃತಪಟ್ಟ ಹದಿನೈದು ದಿನಗಳ ಬಳಿಕ ಈ ಬೆಳವಣಿಗೆ ನಡೆದಿದೆ. ಈ ಸೋಂಕು ನಿರ್ಮೂಲನೆಗೆ ಪಾಕಿಸ್ತಾನ ಸರ್ಕಾರ ನಡೆಸುತ್ತಿರುವ ಪ್ರಯತ್ನಕ್ಕೆ ಈ ಮೂಲಕ ಮತ್ತೊಂದು ಹಿನ್ನಡೆ ಆಗಿದೆ.
ಬಲೂಚಿಸ್ತಾನದ ಕ್ವೆಟ್ಟಾದಲ್ಲಿ ಎರಡು ವರ್ಷದ ಮಗುವೊಂದು ಮೇ 22 ರಂದು ಮೃತಪಟ್ಟಿತ್ತು. ಪೋಲಿಯೊ ಸೋಂಕಿನಿಂದ ಮಗು ಮೃತಪಟ್ಟಿದೆ ಎಂಬುದು ದೃಢಪಟ್ಟಿರುವುದಾಗಿ ಡಾನ್ ದಿನಪತ್ರಿಕೆ ವರದಿ ಮಾಡಿದೆ.
ಏಪ್ರಿಲ್ 29 ರಂದು ಇದ್ದಕ್ಕಿದ್ದಂತೆ ಮಗುವಿನ ಕಾಲುಗಳ ಶಕ್ತಿ ಕುಂದಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಕರಾಚಿಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಸೋಂಕು ಉಲ್ಬಣಗೊಂಡು ಸೋಂಕು ಕೈಗಳಿಗೂ ಹಬ್ಬಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಕೆಲ ದಿನಗಳ ಬಳಿಕ ಮಗು ಮೃತಪಟ್ಟಿದೆ ಎಂದು ವರದಿಯಾಗಿದೆ.
ಪೋಲಿಯೊ ಲಸಿಕೆ ಅಭಿಯಾನದ ಅವಧಿಯಲ್ಲಿ ಮಗು ಲಸಿಕೆ ಪಡೆದುಕೊಂಡಿರಲಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಬಲೂಚಿಸ್ತಾನ ಪ್ರಾಂತ್ಯದಲ್ಲಿ ಈ ವರ್ಷ ನಾಲ್ಕು ಪೋಲಿಯೊ ಪ್ರಕರಣಗಳು ದೃಢಪಟ್ಟಿವೆ. ಜೂನ್ 1 ರಂದು ಸಿಂಧ್ ಪ್ರಾಂತ್ಯದ ಮಗುವಿನಲ್ಲಿ ಪೋಲಿಯೊ ಸೋಂಕು ಕಂಡುಬಂದಿತ್ತು.