ರಾಂಚಿ: ಒಡಿಶಾದ ಬಾಲಸೋರ್ (Balasore Train Tragedy) ನಲ್ಲಿ ರೈಲು ದುರಂತ ಮಾಸುವ ನಡುವೆಯೇ ಜಾರ್ಖಂಡ್ (Jharkhand)ನಲ್ಲಿ ಭಾರೀ ರೈಲು ದುರಂತವೊಂದು ತಪ್ಪಿದೆ. ಜಾರ್ಖಂಡ್ನ ಬೊಕಾರೊದಲ್ಲಿ ಸಂತಾಲ್ದಿಹ್ ರೈಲ್ವೆ ಕ್ರಾಸಿಂಗ್ ಬಳಿ ರೈಲ್ವೆ ಗೇಟ್ಗೆ ಟ್ರಾಕ್ಟರ್ ಅಪ್ಪಳಿಸಿದ್ದು, ಭಾರೀ ಅವಘಡವೊಂದು ತಪ್ಪಿದಂತಾದ ಘಟನೆ ಮಂಗಳವಾರ ಸಂಜೆ ನಡೆದಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನವದೆಹಲಿ-ಭುವನೇಶ್ವರ ರಾಜಧಾನಿ ಎಕ್ಸ್ ಪ್ರೆಸ್ (Delhi-Bhubaneswar Rajdhani Express) ಸಂಜೆ ಭೋಜುದಿಹ್ ಎನ್ನುವ ರೈಲ್ವೆ ನಿಲ್ದಾಣ ( Bhojudih railway station) ಸಮೀಪಿಸುತ್ತಿತ್ತು. ಇದಕ್ಕೂ ಮುನ್ನ ಬರುವ ಸಂತಾಲ್ದಿಹ್ (Santhaldih) ಎಂಬಲ್ಲಿ ರೈಲ್ವೆ ಕ್ರಾಸಿಂಗ್ಗೆ ಡಿಕ್ಕಿ ಹೊಡೆದು ಟ್ರಾಕ್ಟರ್ ಸಿಲುಕಿತ್ತು. ದೂರದಿಂದಲೇ ಇದನ್ನು ಗಮನಿಸಿದ ಲೋಕೋ ಪೈಲಟ್ ಕೂಡಲೇ ರೈಲಿನ ವೇಗವನ್ನು ಕಡಿಮೆ ಮಾಡಿದರು. ಇದರಿಂದ ಭಾರೀ ಅನಾಹುತವೊಂದು ತಪ್ಪಿದೆ.
ಟ್ರಾಕ್ಟರ್ (Tractor) ಕ್ರಾಸಿಂಗ್ನಲ್ಲಿ ಸಿಲುಕಿದ್ದರಿಂದ ಚಲಿಸದ ಸ್ಥಿತಿಯಲ್ಲಿತ್ತು. ಹೀಗಾಗಿ ರೈಲು ವೇಗವಾಗಿ ಬಂದಿದ್ದರೆ ಡಿಕ್ಕಿಯಾಗಿ ಮತ್ತೊಂದು ದುರಂತವನ್ನು ನಾವು ನೋಡಬೇಕಿತ್ತು. ಆದರೆ ಇದನ್ನು ಲೋಕೋ ಪೈಲಟ್ ಗಮನಿಸಿ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದರಿಂದ ನಿಟ್ಟುಸಿರು ಬಿಡುವಂತಾಗಿದೆ. ಘಟನೆಯಿಂದ ಕೆಲ ಹೊತ್ತು ರೈಲು ನಿಲುಗಡೆಯಾಗಿ ನಂತರ ಪ್ರಯಾಣ ಮುಂದುವರಿಸಿತು ಎಂದು ಡಿಆರ್ಎಂ ಮನೀಶ್ ಕುಮಾರ್ ತಿಳಿಸಿದ್ದಾರೆ.