ನಟ ದರ್ಶನ್ ರ ಕರ್ಮಕಾಂಡಗಳು ಬಗೆದಷ್ಟು ಬಯಲಾಗುತ್ತಿದೆ. ಹೊರಗಿನವರಿಗೆ ಮಾತ್ರವಲ್ಲ ಸ್ವತಃದವರಿಗೂ ದರ್ಶನ್ ವಿಲನ್ ಆಗಿಯೇ ಇದ್ದರು ಅನ್ನೋದು ಇದೀಗ ಬಯಲಾಗಿದೆ. ಸ್ವತಃ ತಾನು ಹುಟ್ಟಿದ ತಾಯಿಯ ತವರು ಮನೆಯಲ್ಲೇ ನೆಲಸಮಗೊಳಿಸಿ ತಮ್ಮ ಸೋದರ ಮಾವನವರನ್ನು ಬೀದಿಪಾಲು ಮಾಡಿದ ಪೈಶಾಚಿಕ ಕೃತ್ಯ ಕೊಡಗಿನಲ್ಲಿ ನಡೆದಿದ್ದು, ಈ ಬಗ್ಗೆ ಸ್ವತಃ ಅವರ ಸೋದರ ಮಾವ ಅಳಲು ತೋಡಿಕೊಂಡಿದ್ದಾರೆ.
ದರ್ಶನ್ ಹುಟ್ಟೂರು ತನ್ನ ತಾಯಿಯ ತವರು ಮನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ. ನಟ ದರ್ಶನ್ ಹುಟ್ಟಿದ ಅಜ್ಜಿ-ತಾತನ ಮನೆಯನ್ನು ಸ್ವತಃ ದರ್ಶನ್ ಮತ್ತು ಆತನ ತಾಯಿ ಮೀನಾ ಕೆಡವಿ ನೆಲಸಮಗೊಳಿಸಿ ಸೋದರ ಮಾವಂದಿರನ್ನು ಬೀದಿಪಾಲು ಮಾಡಿದ್ದಾರಂತೆ. ಆಸ್ತಿ ವಿಚಾರವಾಗಿ ಸೋದರ ಮಾವಂದಿರ ಜೊತೆ ಗಲಾಟೆ ಮಾಡಿಕೊಂಡಿದ್ದ ದರ್ಶನ್ ಮತ್ತು ತಾಯಿ ಮೀನಾ ಮನೆಯನ್ನು ನೆಲಸಮ ಮಾಡಿದ್ದಾರೆ. ಈ ಪ್ರಕರಣದ ಕಳೆದ 10 ವರ್ಷಗಳ ಹಿಂದೆ ನಡೆದಿದ್ದು, ಈಗಲೂ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ.
ರೇಣುಕಾಸ್ವಾಮಿ ಕೊಲೆ ಮಾಡಿದ ಆರೋಪದಲ್ಲಿ ಜೈಲು ಸೇರಿರುವ ದರ್ಶನ್ ವಿರುದ್ಧ ಸ್ವತಃ ಅವರ ಸೋದರ ಮಾವ ಟಿ.ಎಲ್. ಶ್ರೀನಿವಾಸ್ ಮಾತನಾಡಿ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಶ್ರೀನಿವಾಸ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ನಾವು ಎತ್ತಿ ಆಡಿಸಿ ಬೆಳೆಸಿದ ದರ್ಶನ್ ಕೊಲೆಯಲ್ಲಿ ಭಾಗಿರುವುದು ಬೇಸರವಾಗಿದೆ. ಈ ಹಿಂದೆ ನಮ್ಮ ಮನೆಯನ್ನು ಆಸ್ತಿ ವಿಚಾರಕ್ಕೆ ಜಗಳ ಮಾಡಿಕೊಂಡು ನೆಲಸಮ ಮಾಡಿದ್ದಾರೆ. ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕಾದ ವಿಚಾರವನ್ನು ಏಕಾಏಕಿ ದೊಡ್ಡದು ಮಾಡಿ ಮನೆಯನ್ನೇ ನೆಲಸಮ ಮಾಡಿದ್ದಾರೆ. ನಂತರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದೇವೆ. ಆದರೆ, ನಟನಾಗಿ ದೊಡ್ಡ ಮಟ್ಟಕ್ಕೆ ಬೆಳೆದ ಹಿನ್ನೆಲೆಯಲ್ಲಿ ನಾವು ಹೆಚ್ಚಾಗಿ ದರ್ಶನ್ ಸಂಪರ್ಕದಲ್ಲಿ ಇಲ್ಲ. ಆದರೆ, ಹೆಂಡತಿಯ ಮೇಲೆ ಹಲ್ಲೆ ಮಾಡಿದಾಗ ಆತನ ಹೆಂಡತಿ ವಿಜಯಲಕ್ಷ್ಮೀ ರಾಜಾಜಿನಗರದಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ನಾವು ಹೋಗಿ ಇಬ್ಬರ ನಡುವೆ ರಾಜಿ ಪಂಚಾಯಿತಿ ಮಾಡಿ ಬಂದಿದ್ದೆವು. ಇದಾದ ನಂತರ ಅವರ ಬಳಿ ಹೋಗಿರಲಿಲ್ಲ. ಈಗ ರೇಣುಕಾಸ್ವಾಮಿ ಎನ್ನುವವರನ್ನು ಕೊಲೆ ಮಾಡಿ ಜೈಲು ಸೇರಿರುವುದು ನೋವಿನ ಸಂಗತಿಯಾಗಿದೆ ಎಂದರು.
ಇತ್ತೀಚೆಗೆ ಕಾಟೇರ ಸಿನಿಮಾ ಮಾಡಿ ಯಶಸ್ಸು ಗಳಿಸಿದ ನಂತರ ಡೆವಿಲ್ ಸಿನಿಮಾ ಮಾಡುತ್ತಿದ್ದರು. ಆದರೆ, ಈಗ ಕೆಟ್ಟದಾಗಿ ಕಾಮೆಂಟ್ ಮಾಡಿದ್ದರಿಂದ ಕೊಲೆ ಮಾಡುವ ಮಟ್ಟಕ್ಕೆ ಹೋಗಿದ್ದಾರೆ. ಈಗ ತನ್ನ ತಾಯಿಯಿಂದಲೂ ನಟ ದರ್ಶನ್ ದೂರ ಇದ್ದಾರೆ. ದರ್ಶನ್ ತಾನು ಬೆಳೆದುಬಂದ ಹಾದಿಯನ್ನು ಯೋಚನೆ ಮಾಡದೇ, ಹೀಗೆ ಅಪರಾಧಿ ಕೃತ್ಯಗಳಲ್ಲಿ ಒಳಗಾಗಿದ್ದಾರೆ. ದರ್ಶನ್ ನಿರಪರಾಧಿ ಎಂದು ಸಾಬೀತಾಗಿ ಹೊರ ಬರುತ್ತಾರೆ ಎಂಬ ನಂಬಿಕೆಯಿದೆ. ಇನ್ನು ಮುಂದಾದರೂ ದರ್ಶನ್ ಒಳ್ಳೆಯ ದಾರಿಯಲ್ಲಿ ನಡೆಯಬೇಕು ಎಂದು ಅವರ ಸೋದರಮಾವ ಶ್ರೀನಿವಾಸ್ ಹೇಳಿದರು.