ಬೆಂಗಳೂರು/ಕಲಬುರಗಿ: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಹನಿಟ್ರ್ಯಾಪ್ ಬಯಲಾಗಿದೆ. ಹೌದು ಮಾಜಿ ಸಚಿವರೊಬ್ಬರಿಗೆ ಹನಿಟ್ರ್ಯಾಪ್ ವಿಡಿಯೊ ತುಣುಕು ತೋರಿಸಿ 20 ಲಕ್ಷ ರೂ. ನೀಡುವಂತೆ ಬ್ಲ್ಯಾಕ್ಮೇಲ್ ಮಾಡಲು ಯತ್ನಿಸಿದ ನಲಪಾಡ್ ಬ್ರಿಗೇಡ್ ಅಧ್ಯಕ್ಷೆ ಮಂಜುಳಾ ಪಾಟೀಲ್ ಹಾಗೂ ಆಕೆಯ ಪತಿ ದರಿಕೆ ಹಾಕುತ್ತಿರುವ ಬಗ್ಗೆ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ನೀಡಿದ ದೂರು ಆಧರಿಸಿ ಕಾರ್ಯಾಚರಣೆ ಕೈಗೊಂಡ ಸಿಸಿಬಿ ಪೊಲೀಸರು ನಲಪಾಡ್ ಬ್ರಿಗೇಡ್ ಕಲಬುರಗಿ ಘಟಕದ ಅಧ್ಯಕ್ಷೆ, ಆಳಂದ ಕಾಲೋನಿ ನಿವಾಸಿ ಮಂಜುಳಾ ಪಾಟೀಲ್ (32) ಹಾಗೂ ಆಕೆಯ ಪತಿ ಶಿವರಾಜ್ ಪಾಟೀಲನನ್ನು (39) ಬಂಧಿಸಿದ್ದಾರೆ. ಬಂಧನದ ಬಳಿಕ ದಂಪತಿಯನ್ನು ನ್ಯಾಯಾಲಯದ ಎದುರು ಹಾಜರುಪಡಿಸಿದ ಬಳಿಕ ಕೋರ್ಟ್ 8 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ್ದು, ಇಬ್ಬರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.
ಆರೋಪಿ ಮಂಜುಳಾ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಅವರ ಮೊಬೈಲ್ ನಂಬರ್ ಪಡೆದು ವಾಟ್ಸಪ್ನಲ್ಲಿ ಪರಿಚಯ ಮಾಡಿಕೊಂಡು ನಂತರ, ವಾಟ್ಸಪ್ನಲ್ಲಿ ಚಾಟ್ ಮಾಡಿದ್ದಾಳೆ. ಆಗಾಗ ಸಲುಗೆಯಿಂದ ಚಾಟಿಂಗ್ ಮಾಡುತ್ತಾ, ತೀರಾ ಸಲುಗೆ ಬೆಳೆಸಿಕೊಂಡಿದ್ದಾಳೆ. ಈ ಮಧ್ಯೆ ತನ್ನೊಂದಿಗೆ ಖಾಸಗಿಯಾಗಿ ಕಾಣಿಸಿಕೊಂಡ ಮಾಜಿ ಸಚಿವರ ದೃಶ್ಯಗಳನ್ನು ವಿಡಿಯೋ, ಫೋಟೋಗಳನ್ನು ಇಟ್ಟುಕೊಂಡು, ಆ ವಿಡಿಯೋ ತುಣುಕು ಮಾಜಿ ಸಚಿವರಿಗೆ ಕಳುಹಿಸಿ ಬೆದರಿಕೆ ಹಾಕಲು ಶುರು ಮಾಡಿದ್ದಾಳೆ.
20 ಲಕ್ಷ ರೂ. ನೀಡದೆ ಹೋದರೆ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಈ ಬೆಳವಣಿಗೆಯಿಂದ ಕಂಗಾಲಾದ ಮಾಜಿ ಸಚಿವರು ಈ ಕುರಿತು ತಮ್ಮ ಪುತ್ರನೊಂದಿಗೆ ಎಲ್ಲವನ್ನೂ ಹಂಚಿಕೊಂಡಿದ್ದಾರೆ. ಪುತ್ರ ತಮ್ಮ ತಂದೆಗೆ ಧೈರ್ಯ ತುಂಬಿ ಮಹಿಳೆಯ ವಿರುದ್ಧ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಜೊತೆಗೆ, ಹಣ ಕೊಡುವುದಾಗಿ ಮಹಿಳೆಯನ್ನು ಬೆಂಗಳೂರಿಗೆ ಕರೆಸಿ, ಆಕೆ ಪತಿಯೊಂದಿಗೆ ಹಣ ಪಡೆಯಲು ಬಂದಾಗ ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.