ಕಳೆದ ಕೆಲ ದಿನಗಳಿಂದ ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧ ಮುಂದುವರೆದಿದೆ. ಇದೀಗ ಇರಾನ್ ಗೆ ಇಸ್ರೇಲ್ ಸೇನೆ ಮತ್ತೊಂದು ಅಘಾತ ನೀಡಿದೆ.
ತನ್ನ ಗುಪ್ತಚರ ಸಂಸ್ಥೆ ನೀಡಿದ್ದ ಮಾಹಿತಿ ಆಧಾರದ ಮೇಲೆ ಬೈರುತ್ನಲ್ಲಿ ವಾಯುದಾಳಿ ನಡೆಸಿದ ಇಸ್ರೇಲ್ ಸೇನೆ ಹೆಜ್ಬೊಲ್ಲಾದ ಸಂವಹನ ಘಟಕದ ಕಮಾಂಡರ್ ಮೊಹಮ್ಮದ್ ರಶೀದ್ ಸಕಾಫಿಯನ್ನು ಹತ್ಯೆ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಇಸ್ರೇಲ್ ಸೇನೆ, ಮೃತ ಸಕಾಫಿ ಹೆಜ್ಬೊಲ್ಲಾ ಭಯೋತ್ಪಾದಕ ಸಂಘಟನೆಯ ಪ್ರಮುಖ ಕಮಾಂಡರ್ ಆಗಿದ್ದರು. ಆವರು 2000 ರಿಂದ ಸಂಘಟನೆಯ ಸಂವಹನ ಘಟಕದ ಮುಖ್ಯಸ್ಥನಾಗಿದ್ದರು. ಹೆಜ್ಬೊಲ್ಲಾದ ಎಲ್ಲಾ ಘಟಕಗಳ ನಡುವೆ ಸಂವಹನ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಸಕಾಫಿ ಗಮನಾರ್ಹ ಪ್ರಯತ್ನಗಳನ್ನು ನಡೆಸಿದ್ದರು ಎಂದು ಐಡಿಎಫ್ ಮಾಹಿತಿ ನೀಡಿದೆ.
ಬೈರುತ್ನ ದಕ್ಷಿಣದ ಉಪನಗರವಾದ ದಹಿಯೆಹ್, ಇರಾನ್ ಬೆಂಬಲಿತ ಹಿಜ್ಬುಲ್ಲಾದ ಭದ್ರಕೋಟೆಯಾಗಿದ್ದು, ಗುರುವಾರ ಮಧ್ಯರಾತ್ರಿ ವೇಳೆ ಇಸ್ರೇಲ್ ವಾಯುಸೇನೆ ದಾಳಿ ನಡೆಸಿ ಮೊಹಮ್ಮದ್ ರಶೀದ್ ಸಕಾಫಿಯನ್ನು ಹೊಡೆದುರುಳಿಸಿದೆ.
ಇದಕ್ಕೂ ಮೊದಲು ಇದೇ ಪ್ರದೇಶದಲ್ಲಿ ಜನರು ತಮ್ಮ ಮನೆಗಳನ್ನು ತೊರೆಯುವಂತೆ ಸೂಚಿಸಲಾಗಿತ್ತು. ಆದರೆ ಇದೇ ಪ್ರದೇಶದಲ್ಲಿ ಇಸ್ರೇಲ್ ಸೇನೆ ವಾಯುದಾಳಿ ನಡೆಸಿ ಮೊಹಮ್ಮದ್ ರಶೀದ್ ಸಕಾಫಿಯನ್ನು ಹೊಡೆದುರುಳಿಸಿದೆ.