ಈ ಬಾರಿಯ ಐಪಿಎಲ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಅಷ್ಟು ಉತ್ತಮವಾಗಿಲ್ಲ. ಇದುವರೆಗೆ ಆಡಿರುವ 8 ಪಂದ್ಯಗಳಲ್ಲಿ 3ರಲ್ಲಿ ಮಾತ್ರ ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಇಂತಹ ಕಳಪೆ ಪ್ರದರ್ಶನದ ನಡುವೆಯೇ ಕೆಕೆಆರ್ ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದೆ.
ಕೆಕೆಆರ್ ತಂಡದ ಆರಂಭಿಕ ಆಟಗಾರ ಲಿಟ್ಟನ್ ದಾಸ್ ಐಪಿಎಲ್ನಿಂದ ಹೊರಬಿದ್ದಿದ್ದಾರೆ. ಕೌಟುಂಬಿಕ ಕಾರಣದಿಂದಾಗಿ ದಾಸ್ ಬಾಂಗ್ಲಾದೇಶಕ್ಕೆ ಮರಳಿದ್ದಾರೆ ಎಂದು ತಿಳಿದುಬಂದಿದೆ.
ಇದೇ ಮೊದಲ ಬಾರಿಗೆ ಐಪಿಎಲ್ ಆಡುತ್ತಿದ್ದ ಲಿಟ್ಟನ್ ದಾಸ್ ಅವರನ್ನು ಕೋಲ್ಕತ್ತಾ 50 ಲಕ್ಷಕ್ಕೆ ಖರೀದಿಸಿತು. ಕೇವಲ ಒಂದು ಪಂದ್ಯದಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದ್ದ ದಾಸ್ 4 ರನ್ ಮಾತ್ರ ಬಾರಿಸಿದ್ದರು.
ಅಲ್ಲದೆ ಲಿಟನ್ ದಾಸ್ಗೆ ಮತ್ತೆ ತಂಡದಲ್ಲಿ ಅವಕಾಶ ಸಿಗುವುದು ಕಷ್ಟಕರವಾಗಿತ್ತು. ಏಕೆಂದರೆ ಕೋಲ್ಕತ್ತಾ ತಂಡ ಸುನಿಲ್ ನರೈನ್, ಆಂಡ್ರೆ ರಸೆಲ್, ಜೇಸನ್ ರಾಯ್ ಮತ್ತು ಡೇವಿಡ್ ವಿಸಾ ರೂಪದಲ್ಲಿ ನಾಲ್ಕು ವಿದೇಶಿ ಆಟಗಾರರಿಗೆ ಅವಕಾಶ ನೀಡುತ್ತಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಪ್ಲೇಆಫ್ ತಲುಪಲು ಇನ್ನೂ ಅವಕಾಶವಿದೆ. ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿದ್ದ ಕೋಲ್ಕತ್ತಾಗೆ 6 ಪಂದ್ಯಗಳು ಬಾಕಿಯಿದ್ದು, 5 ಪಂದ್ಯಗಳನ್ನು ಗೆದ್ದರೆ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳಬಹುದು. ಆದಾಗ್ಯೂ, ಇದಕ್ಕಾಗಿ ಅವರು ಉತ್ತಮ ಆಟ ಪ್ರದರ್ಶಿಸಬೇಕಾಗುತ್ತದೆ.