ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಕಳೆದ 4 ತಿಂಗಳಿನಿಂದ ಜೈಲಿನಲ್ಲಿರುವ ದರ್ಶನ್ ಗೆ ಸದ್ಯಕ್ಕೆ ಸಂಕಷ್ಟಗಳ ಮುಗಿಯುವ ಲಕ್ಷಣಗಳು ಕಾಣುತ್ತಿವೆ. ಅವರ ವಿರುದ್ಧ ಒಂದರ ಮೇಲೊಂದರಂತೆ ಪ್ರಕರಣಗಳು ದಾಖಲಾಗುತ್ತಲೆ ಇದೆ. ಇದೀಗ ದರ್ಶನ್ ವಿರುದ್ಧದ ಹಳೆಯ ಪ್ರಕರಣವೊಂದಕ್ಕೆ ಮರು ಜೀವ ದೊರಕಿದೆ.
ಕಳೆದ ಕೆಲ ವರ್ಷಗಳ ಹಿಂದೆ ದರ್ಶನ್, ಯುವ ನಿರ್ಮಾಪಕರೊಬ್ಬರಿಗೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ ದೂರು ದಾಖಲಾಗಿತ್ತು. ಆ ಪ್ರಕರಣ ಈಗ ಮತ್ತೆ ಸುದ್ದಿಯಾಗಿದೆ.. 2022 ರಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಕುರಿತಾಗಿ ಹೊಸದಾಗಿ ಎನ್ಸಿಆರ್ ದಾಖಲಾಗಿದೆ.
ಯುವ ನಿರ್ಮಾಪಕ ಭರತ್ ಎಂಬುವರು ತಮಗೆ ಕರೆ ಮಾಡಿದ್ದ ದರ್ಶನ್ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಿಸಿದ್ದರು. ಅದಕ್ಕೆ ಸಂಬಂಧಿಸಿದಂತೆ ಕರೆ ಮಾಹಿತಿ, ಕಾಲ್ ರೆಕಾರ್ಡ್ಗಳನ್ನು ಸಹ ಆಗ ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿದ್ದರು. 2022 ರಲ್ಲಿ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಎನ್ಸಿಆರ್ ದಾಖಲಾಗಿತ್ತು. ಈಗ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಎನ್ಸಿಆರ್ ದಾಖಲಾಗಿದ್ದು, ತನಿಖೆ ನಡೆಯುವ ಸಾಧ್ಯತೆ ಇದೆ.
ಯುವ ನಿರ್ಮಾಪಕ ಭರತ್, ‘ಭಗವಾನ್ ಶ್ರೀಕೃಷ್ಣಾ’ ಹೆಸರಿನ ಸಿನಿಮಾ ಪ್ರಾರಂಭ ಮಾಡಿದ್ದರು. ಸಿನಿಮಾಕ್ಕೆ ಧ್ರುವನ್ ನಾಯಕ ನಟನಾಗಿದ್ದರು. ಆದರೆ ಕೋವಿಡ್ ಬಂದ ಕಾರಣಕ್ಕೆ ಸಿನಿಮಾದ ಚಿತ್ರೀಕರಣ ನಿಂತು ಹೋಯ್ತು. ಬಳಿಕ ಧ್ರುವನ್, ದರ್ಶನ್ ಬಳಿ ಹೋಗಿ ಅವರ ಕೈಯಿಂದ ಭರತ್ಗೆ ಕರೆ ಮಾಡಿಸಿದ್ದರು. ಆಗ ಭರತ್ ಬಿಡುಗಡೆ ಮಾಡಿದ್ದ ಆಡಿಯೋ ರೆಕಾರ್ಡ್ನಲ್ಲಿದ್ದಂತೆ, ಆರಂಭದಲ್ಲಿ ಕೂಲ್ ಆಗಿಯೇ ಮಾತನಾಡಿದ್ದ ದರ್ಶನ್, ‘ಧ್ರುವನ್ ನಿಮ್ಮನ್ನೆ ನಂಬಿದ್ದಾನೆ, ಸಿನಿಮಾ ನಿಲ್ಲಿಸಬೇಡಿ’ ಎಂದು ಮನವಿ ಮಾಡಿದ್ದರು. ಆದರೆ ಮಾತು ಮುಂದುವರೆದಂತೆ, ‘ಸಿನಿಮಾ ಮುಗಿಸದೇ ಇದ್ದರೆ, ಭೂಮಿ ಮೇಲೆ ಇಲ್ಲದಂತೆ ಮಾಡಿಬಿಡುತ್ತೇನೆ’ ಎಂದೆಲ್ಲ ಬೆದರಿಕೆ ಹಾಕಿದ್ದರು. ಕೆಲವು ಅವಾಚ್ಯ ಶಬ್ದಗಳನ್ನು ಸಹ ದರ್ಶನ್ ಬಳಸಿದ್ದರು.
ಆಗ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಭರತ್ ದೂರು ದಾಖಲಿಸಿದ್ದರು. ಆಗ ಎನ್ಸಿಆರ್ ದಾಖಲಿಸಿಕೊಂಡಿದ್ದ ಪೊಲೀಸರು ಧ್ರುವನ್, ದರ್ಶನ್ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ ಈಗ ಧ್ರುವನ್ ಅಲಿಯಾಸ್ ಸೂರಜ್, ದರ್ಶನ್ ಮತ್ತು ದರ್ಶನ್ ಮ್ಯಾನೇಜರ್ ನಾಗರಾಜು ವಿರುದ್ಧ ಹೊಸದಾಗಿ ಎನ್ಸಿಆರ್ ದಾಖಲಿಸಿದ್ದು, ಪ್ರಕರಣದ ತನಿಖೆ ನಡೆಸುವ ಸಾಧ್ಯತೆ ಇದೆ. ತನಿಖೆ ನಡೆಸಲೆಂದೇ ಹೊಸದಾಗಿ ಎನ್ಸಿಆರ್ ಮಾಡಿದ್ದಾರೆ ಎನ್ನಲಾಗುತ್ತಿದೆ.