ಬಿಗ್ ಬಾಸ್ ಮೂಲಕ ಸಾಕಷ್ಟು ಖ್ಯಾತಿ ಘಳೀಸಿದ ಹಳ್ಳಿಕಾರ್ ಎಂದೇ ಜನಪ್ರಿಯತೆ ಪಡೆದ ವರ್ತೂರು ಸಂತೋಷ್ ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಬಿಗ್ ಬಾಸ್ ಮನೆಯಲ್ಲಿದ್ದ ವೇಳೆ ಹುಲಿ ಉಗುರಿನ ಕಾರಣದಿಂದ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ವರ್ತೂರು ಸಂತೋಷ್ ಗೆ ಇದೀಗ ಠಾಣೆ ಮೆಟ್ಟಿಲೇರುವ ಸ್ಥಿತಿ ಬಂದಿದೆ.
ವರ್ತೂರ್ ಸಂತೋಷ್ ಅವರು ಪ್ರಾಣಿಗಳ ಸಾಗಾಣಿಕೆ ಮಾಡುವಲ್ಲಿ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. SPCA ಪ್ರಾಣಿ ಕಲ್ಯಾಣ ಅಧಿಕಾರಿ ಹರೀಶ್ ಎಂಬುವವರು ಈ ಬಗ್ಗೆ ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವರ್ತೂರು ಸಂತೋಷ್ ಅವರು ಒಂದು ಸುತ್ತಿನ ವಿಚಾರಣೆ ಮುಗಿಸಿದ್ದಾರೆ. ಕೇವಲ ಎನ್ಸಿಆರ್ ಮಾಡಿ ಪ್ರಕರಣ ಮುಚ್ಚಿ ಹಾಕುವುದ ಬೇಡ. ಎಫ್ಐಆರ್ ದಾಖಲು ಮಾಡಿ ಕೋರ್ಟ್ ಮೆಟ್ಟಿಲೇರಲು ದೂರುದಾರ ಹರೀಶ್ ಅವರು ಸಿದ್ಧತೆ ನಡೆಸಿದ್ದಾರೆ. ಒಂದು ವೇಳೆ ಎಫ್ಐಆರ್ ದಾಖಲಾದರೆ ವರ್ತೂರು ಸಂತೋಷ್ಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ವರ್ತೂರು ಸಂತೋಷ್ ಅವರು ಒಂದು ಕಡೆ ಹಳ್ಳಿಕಾರ್ ರೇಸ್ಗೆ ಸಿದ್ಧತೆ ನಡೆಸಿದ್ದಾರೆ. ಇದು ಇರುವಾಗಲೇ ಹಳ್ಳಿಕಾರ್ ಹಸುಗಳನ್ನ ವಾಹನದಲ್ಲಿ ಸಾಗಾಣಿಕೆ ಮಾಡುವಾಗ ರೂಲ್ಸ್ ಬ್ರೇಕ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಒಂದೇ ಒಂದು ಟ್ರಕ್ನಲ್ಲಿ ಬರೋಬ್ಬರಿ 9 ಹೋರಿಗಳನ್ನು ಹಾಗೂ ಇತರೆ ಸಂಬಂಧಿಸಿದ ವಸ್ತುಗಳನ್ನಿಟ್ಟು ಫಾರ್ಮ್ ಹೌಸ್ನಿಂದ ಸಾಗಾಟ ಮಾಡಿರುವ ಆರೋಪ ಇದೆ. ಇದು ಪ್ರಾಣಿ ಹಿಂಸೆ, ಪ್ರಾಣಿಗಳ ಸಾಗಾಟ ನಿಯಮವನ್ನು ಉಲ್ಲಂಘಿಸದಂತೆ ಆಗುತ್ತದೆ. ಈ ಹಿನ್ನೆಲೆಯಲ್ಲಿ ವರ್ತೂರು ಸಂತೋಷ್ ಮೇಲೆ ಠಾಣೆಯಲ್ಲಿ ದೂರು ನೀಡಲಾಗಿದೆ.