ಹುಬ್ಬಳ್ಳಿ ಮಾ.6: ವಾಹನ ಚಾಲನಾ ಪರವಾನಿಗೆ ಪಡೆಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ನೂತನವಾಗಿ ಆರಂಭಗೊAಡಿರುವ ಧಾರವಾಡ (ಪೂರ್ವ) ಪ್ರಾದೇಶಿಕ ಸಾರಿಗೆ ಕಚೇರಿಗೆ ಶೀಘ್ರವೇ ಮರ್ನಾಲ್ಕು ಎಕರೆಯಲ್ಲಿ ವಾಹನ ಪರೀಕ್ಷಾ ಪಥವನ್ನು ಒದಗಿಸುವುದಾಗಿ ಸಾರಿಗೆ ಹಾಗೂ ಮುಜರಾಯಿ ಖಾತೆ ಸಚಿವರಾದ ರಾಮಲಿಂಗಾರೆಡ್ಡಿ ಹೇಳಿದರು. ಹುಬ್ಬಳ್ಳಿಯ ಗಬ್ಬೂರು ಕ್ರಾಸ್ನಲ್ಲಿ ಇಂದು ಧಾರವಾಡ ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಅಗಾಧವಾಗಿ ಬೆಳೆಯುತ್ತಿರುವ ಅವಳಿ ನಗರ ಹಾಗೂ ಇಡೀ ಜಿಲ್ಲೆಗೆ ಇರುವ ನವನಗರ ಸಾರಿಗೆ ಕಚೇರಿಗೆ ಜನ ದಟ್ಟನೆಯಿಂದ ಸಾರ್ವಜನಿಕರಿಗೆ ತೀರಾ ತೊಂದರೆಯಾಗಿತ್ತು. ಹೀಗಾಗಿ ಶಾಸಕರಾದ ಅಬ್ಬಯ್ಯ ಪ್ರಸಾದ ಅವರ ಪ್ರಸ್ತಾವನೆಯಂತೆ ಈ ನೂತನ ಕಚೇರಿಯನ್ನು 8 ಕೋಟಿ ವೆಚ್ಚದಲ್ಲಿ ಮಂಜೂರಾತಿ ನೀಡಿ ಈಗ ಉದ್ಘಾಟನೆಯಾಗಿದೆ. ವಾಹನ ಪರೀಕ್ಷಾ ಪಥಕ್ಕೆ ಮರ್ನಾಲ್ಕು ಎಕರೆ ಗುರುತಿಸಿದಲ್ಲಿ ಇಲಾಖೆಯಿಂದ ಶೀಘ್ರವೇ ಅನುಮೋದನೆ ನೀಡಲಾಗುವುದೆಂದರು
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು ಮಾತನಾಡಿ ಇಡೀ ಉತ್ತರ ಕರ್ನಾಟಕಕ್ಕೆ 800 ಬಸ್ಗಳನ್ನು ಸಾರಿಗೆ ಸಚಿವರು ಅನುಮೋದಿಸಿದ್ದಾರೆ. ಈ ಪೈಕಿ ಈಗಾಗಲೇ 50 ಬಸ್ಗಳನ್ನು ಒದಗಿಸಿದ್ದಾರೆ. ಸರ್ಕಾರವು ನುಡಿದಂತೆ ನಡೆಯುತ್ತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಪ್ರಸಾದ ಅಬ್ಬಯ್ಯ ಅವರು ಮಾತನಾಡಿ, ನವನಗರ ಪ್ರಾದೇಶಿಕ ಸಾರಿಗೆ ಕಚೇರಿಗೆ ದಟ್ಟನೆಯಾಗುತ್ತಿರುವ ಹಿನ್ನಲೆಯಲ್ಲಿ ಈ ನೂತನ ಕಚೇರಿ ಆರಂಭಿಸಲಾಗಿದ್ದು ಇದರಿಂದ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.
ಒಂದು ಎಕರೆ 20 ಗುಂಟೆಯಲ್ಲಿ ಬೃಹತ್ ಕಚೇರಿಯನ್ನು 8 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿ ತಮ್ಮ ಅವಧಿಯಲ್ಲೆ ಉದ್ಘಾಟಿಸಿದ ಸಾರಿಗೆ ಸಚಿವರ ಕಾರ್ಯವನ್ನು ಶ್ಲಾಘಿಸಿದ ಶಾಸಕರು ಶಕ್ತಿ ಯೋಜನೆಗೆ ನಿಜವಾದ ಶಕ್ತಿ ತುಂಬಿದ್ದಾರೆ ಎಂದರು. ಪ್ರತಿ ದಿನ 60 ಲಕ್ಷ ಮಹಿಳೆಯರು ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸುತ್ತಿರುವುದು ದೇಶಕ್ಕೆ ಮಾದರಿಯಾಗಿದೆ ಎಂದು ಅಭಿಪ್ರಾಯ ಪಟ್ಟರು. ಪ್ರಾದೇಶಿಕ ಸಾರಿಗೆ ಆಯುಕ್ತ ಡಾ. ಮಾರುತಿ ಸಾಂಬ್ರಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾರಿಗೆ ಜಂಟಿ ನಿರ್ದೇಶಕಿ ಓಂಕಾರೇಶ್ವರಿ ಎಂ.ಟಿ. ಸ್ವಾಗತಿಸಿದರು. ಸದಾನಂದ ಡಂಗಣ್ಣವರ, ಮೋಹನ ಅಸುಂಡಿ, ಮಹೇಂದ್ರ ಸಿಂಘ್, ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಭರತ, ಪ್ರಾದೇಶಿಕ ಸಾರಿಗೆ ಅಧಿಕಾರಿ ದಾಮೋದರ ಹಾಗೂ ಇತರರು ವೇದಿಕೆಯಲ್ಲಿದ್ದರು.