ಬೆಂಗಳೂರು: ಬೆಸ್ಕಾಂ ನಿರ್ಲಕ್ಷದ ಪರಿಣಾಮ ತಾಯಿ ಮತ್ತು ಪುಟ್ಟ ಕಂದಮ್ಮ ಎಲೆಕ್ಟ್ರಿಕ್ ವೈರ್ ಗೆ ಸಿಲುಕಿ, ಸಾರ್ವಜನಿಕರ ಮುಂದೆ ಉರಿದು ಬಿದ್ದ ಅಮಾನುಷ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದು, ಈ ಸರಕಾರದ ಮುಖ್ಯಸ್ಥರಾದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್, ಇಂಧನ ಸಚಿವ ಜಾರ್ಜ್ ಅವರೇ ಈ ಸಾವಿಗೆ ಕಾರಣ. ಆದ್ದರಿಂದ ಅವರ ಮೇಲೆ ಎಫ.ಐ.ಆರ್ ಹಾಕಬೇಕು ಎಂದು ವಿಧಾನಪರಿಷತ್ ಹಿರಿಯ ಸದಸ್ಯ, ಜೆಡಿಎಸ್ ಹಿರಿಯ ನಾಯಕ ಟಿ. ಎ.ಶರವಣ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಯಾರೋ ಮಾಡಿದ ಸಣ್ಣ ತಪ್ಪಿಗೆ, ಕುಮಾರಸ್ವಾಮಿ ಅವರನ್ನು ಹೊಣೆಗಾರರನ್ನಾಗಿ ಮಾಡಿ ವಿದ್ಯುತ್ ಕಳ್ಳತನದ ಆರೋಪ ಹಾಕಿ ದಂಡ ಕಟ್ಟಿಸಿಕೊಂಡ ಈ ಸರಕಾರ, ಹಾಡು ಹಗಲೇ ತಾಯಿ ಮತ್ತು ಪುಟ್ಟ ಕಂದಮ್ಮಗಳ ಸಾವಿಗೆ ಕಾರಣವಾಗಿದೆ. ಇದು ಅಕ್ಷಮ್ಯ ನಿರ್ಲಕ್ಷ. ಸರಕಾರವೇ ಮಾಡಿದ ಕೃತ್ಯ ಆಗಿದೆ. ಆದ್ದರಿಂದ ಸರಕಾರದ ಮುಖ್ಯಸ್ಥರು, ಮತ್ತು ಇಂಧನ ಸಚಿವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕು ಎಂದು ಆಗ್ರಹಪಡಿಸಿದರು.
ದಪ್ಪ ಚರ್ಮದ, ಮಾನವೀಯತೆ ಇಲ್ಲದ ಸರಕಾರ ಈ ದಾರುಣ ಸಾವುಗಳ ಬಗ್ಗೆ ಚಿಂತೆಯೇ ಇಲ್ಲದೆ ರಾಜಕಾರಣದಲ್ಲಿ ತೊಡಗಿರುವುದು ಇವರ ಕೆಟ್ಟ ಮನಸ್ಥಿತಿಗೆ ಸಾಕ್ಷಿ. ಮೃತ ಪಟ್ಟ ಕುಟುಂಬಗಳಿಗೆ 5ಲಕ್ಷ ಪರಿಹಾರ ಕೊಟ್ಟು ಕೈತೊಳೆದುಕೊಂದರೆ ಸಾಕೆ? ಸತ್ತ ಜೀವಗಳು ವಾಪಸ್ ಬರುತ್ತದೆಯೇ? ಎರಡು ಅಮೂಲ್ಯ ಪ್ರಾಣಗಳನ್ನು ಕಳೆದು ಕೊಂಡ ಕುಟುಂಬಕ್ಕೆ ತಲಾ 25ಲಕ್ಷ ಪರಿಹಾರ ನೀಡಬೇಕು. ಒಟ್ಟು ಐವತ್ತು ಪಕ್ಷ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಕುಮಾರಸ್ವಾಮಿ ಅವರನ್ನು ಪ್ರತಿನಿತ್ಯ ಟೀಕಿಸುತ್ತ, ಬೆಳಿಗ್ಗೆಯಿಂದ ಸಂಜೆಯವರೆಗೆ ಅವರ ನಾಮ ಸ್ಮರಣೆ ಮಾಡುವುದೇ ಈ ಸರಕಾರಕ್ಕೆ, ಕಾಂಗ್ರೆಸ್ ಪಕ್ಷದ ದೊಡ್ಡ ದೊಡ್ಡ ನಾಯಕರಿಗೆ ಒಂದು ಕೆಲಸ ಆಗಿದೆ ಎಂದು ಗೇಲಿ ಮಾಡಿದ ಶರವಣ, ಪ್ರಜಾಸತ್ತೆಯಲ್ಲಿಸಮರ್ಥ ಪ್ರತಿಪಕ್ಷ ನಾಯಕರಾಗಿ ಕುಮಾರಣ್ಣ ಕಾರ್ಯನಿರ್ವಹಿಸುತ್ತಿದ್ದು, ಅವರ ವಿರುದ್ಧ ಕಾಂಗ್ರೆಸ್ ನಾಯಕರು ವ್ಯಕ್ತಿಗತ ದ್ವೇಷದ ರಾಜಕೀಯ ಮಾತಾಡುತ್ತಿದ್ದಾರೆ . ಬರುವ ದಿನಗಳಲ್ಲಿ ರಾಜ್ಯದ ಜನ ಕಾಂಗ್ರೆಸ್ ನ ಮನೋಭಾವಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಟೀಕಿಸಿದರು.
ಕುಮಾರಸ್ವಾಮಿ ಅವರ ಪೆನ್ ಡ್ರೈವ್ ಬಗ್ಗೆ ಹಗುರವಾಗಿ ಮಾತಾಡಬೇಡಿ.. ಹುಶಾರ್..ದಾಖಲೆ ಇಲ್ಲದೆ ಅವರು ಮಾತಾಡುವವರಲ್ಲ. ಅವರನ್ನು ಹಿಟ್ ಅಂಡ್ ರನ್ ಎಂದೇ ಹೇಳಿ, ಲಘುವಾಗಿ ಪರಿಗಣಿಸಿದರೆ, ಬರುವ ದಿನಗಳಲ್ಲಿ ಈ ಸರಕಾರದ ಕೆಲವು ವ್ಯಕ್ತಿಗಳಂತೂ ಅದರಲ್ಲೂ ಕೆಲವು ಮಂತ್ರಿ ಗಳು ಸಮಸ್ಯೆಗೆ ಸಿಲುಕುವುದು ಗ್ಯಾರಂಟಿ ಎಂದು ಎಚ್ಚರಿಕೆ ನೀಡಿದ್ದಾರೆ.
ನಾನು ವಿಧಾನಪರಿಷತ್ ಸದಸ್ಯರಾಗಲು ಮಾಜಿ ಪ್ರಧಾನಿ ದೇವೇಗೌಡರಿಗೆ ಹಣ ಕೊಟ್ಟಿರುವುದಾಗಿ ಹಿರಿಯ ನಾಯಕ ಸಿಎಂ ಇಬ್ರಾಹಿಂ ಹೇಳಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂತಹದ್ದಲ್ಲ.
ಪಕ್ಷದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ಅದರಲ್ಲೂ ದೇವೇಗೌಡರ ಓಲೈಕೆ ಮಾಡಿಕೊಂಡು ಬೆಳೆದು, ಪಕ್ಷದ ಎಲ್ಲ ತೀರ್ಮಾನಗಳಲ್ಲಿ ಭಾಗಿ ಆಗಿ, ಈಗ ಏಕಾಏಕಿ ಊಸರವಳ್ಳಿ ಯಂತೆ ಬಣ್ಣ ಬದಲಿಸುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.
ರಾಜಕಾರಣದಲ್ಲಿ ಘನತೆ ಇಲ್ಲದ ನಾಯಕ. ಕಾಲಕ್ಕೆ ತಕ್ಕಂತೆ ಬಣ್ಣ ಬದಲಾಯಿಸುವ ನಾಯಕ ಇಬ್ರಾಹಿಂ.
ಪಕ್ಷಕ್ಕೆ ನಾನು ಏನೇ ಸೇವೆ ಮಾಡಿದ್ದರೂ ಅದು ನಾನಾಗಿಯೇ ಮಾಡಿದ್ದೇನೆ ಹೊರತು, ಯಾವೊಬ್ಬ ನಾಯಕರೂ ನನಗೆ ಈವರೆಗೆ ಕೇಳಿಲ್ಲ ಎಂದು ಸ್ಪಷ್ಟನೆ ನೀಡಿದರು.
ಮೊನ್ನೆ ಮೊನ್ನೆಯವರೆಗೆ ದೇವೇಗೌಡರನ್ನು ಪಿತೃ ಸಮಾನ, ಕುಮಾರಸ್ವಾಮಿ ಅವರನ್ನು ಸಹೋದರ ಸಮಾನ ಎನ್ನುತ್ತಿದ್ದ ಇಬ್ರಾಹಿಂ, ಈಗ ಹದ್ದು ಮೀರಿ ನಾಲಿಗೆ ಹರಿ ಬಿಡುತ್ತಿರುವುದನ್ನು, ಕ್ಷುಲ್ಲಕವಾಗಿ ಮಾತಾಡುತ್ತಿರುವುದನ್ನು ನಿಲ್ಲಿಸಲಿ.ದೇವೇಗೌಡರ ಪುತ್ರ ಪ್ರೇಮದ ಬಗ್ಗೆ ಟೀಕಿಸುತ್ತಿರುವ ಇಬ್ರಾಹಿಂ, ಜೆಡಿಎಸ್ ಅಭ್ಯರ್ಥಿ ಆಗಿ ತಮ್ಮ ಮಗನನ್ನು ಹುಮನಾಬಾದ್ ನಿಂದ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನಿಲ್ಲಿಸಲಿಲ್ಲವೆ?ಅವರಿಗೆ ಪುತ್ರ ಪ್ರೇಮ ಇಲ್ಲವೇ?ದೇವೇಗೌಡರ ಬಗ್ಗೆ ಮಾತಾಡಲು ಅವರಿಗೇನು ನೈತಿಕತೆ ಇದೆ?ಪಕ್ಷದ ಅಧ್ಯಕ್ಷರಾಗಿ ಅವರ ಮಗನಿಗೆ ಅವರೇ ಟಿಕೆಟ್ ಕೊಟ್ಟರು…
ತನ್ನ ಮರ್ಯಾದೆಯನ್ನು ತಾನೇ ಹರಾಜು ಹಾಕಿಕೊಳ್ಳಲು ಹೊರಟಿದ್ದಾರೆ ಅವರು ಎಂದು ವಾಗ್ದಾಳಿ ನಡೆಸಿದರು.
ಗಾಜಿನ ಮನೆಯಲ್ಲಿರುವ ಇಬ್ರಾಹಿಂ, ಬೇರೆಯವರ ಮನೆ ಮೇಲೆ ಕಲ್ಲು ತೂರಾಟ ನಡೆಸುವುದನ್ನು ನಿಲ್ಲಿಸಲಿ ಎಂದು ಶರವಣ ಕಿವಿಮಾತು ಹೇಳಿದ್ದಾರೆ