ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಜಿಆರ್ ಫಾರ್ಮ್ಸ್ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯಲ್ಲಿ ನಟಿ ಹೇಮಾ ಭಾಗಿಯಾಗಿದ್ದರು ಎಂದು ನಗರ ಪೊಲೀಸ್ ಕಮಿಷನರ್ ದಯಾನಂದ್ ಸ್ಪಷ್ಟನೆ ನೀಡಿದ್ದಾರೆ. ಆದರೂ ಸುಮ್ಮನಾಗದ ನಟಿ ಹೇಮಾ ಇದೀಗ ಮತ್ತೊಂದು ವಿಡಿಯೋ ಮಾಡಿದ್ದು ಅದನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ರೇವ್ ಪಾರ್ಟಿಯ ಮೇಲೆ ರೈಡ್ ಆಗುತ್ತಿದ್ದಂತೆ ಅಲ್ಲೇ ಇದ್ದ ಮಾವಿನ ತೋಟದಿಂದ ವಿಡಿಯೋ ಮಾಡಿದ್ದ ನಟಿ ನಾನು ಹೈದರಾಬಾದ್ ನ ಫಾರಂ ಹೌಸ್ ನಲ್ಲಿ ಇದ್ದೇನೆ ಎಂದು ಹೇಳಿದ್ದರು. ಇದೀಗ ಮತ್ತೊಂದು ವಿಡಿಯೋವನ್ನು ಹೇಮಾ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಮನೆಯಲ್ಲಿ ಚಿಕನ್ ಬಿರಿಯಾನಿ ಮಾಡುತ್ತಿರುವ ವಿಡಿಯೋ ಒಂದನ್ನು ಹೇಮಾ ಇದೀಗ ಹಂಚಿಕೊಂಡಿದ್ದಾರೆ. ವಿಡಿಯೋನಲ್ಲಿ ಹೇಮಾ, ತಮ್ಮ ಮನೆಯಲ್ಲಿ ಚಿಕನ್ ಬಿರಿಯಾನಿ ಮಾಡುತ್ತಿದ್ದಾರೆ. ಆದರೆ ಈ ವಿಡಿಯೋನಲ್ಲಿ ಅವರು ಬೆಂಗಳೂರಿನ ರೇವ್ ಪಾರ್ಟಿ ವಿಷಯ ಮಾತನಾಡಿಲ್ಲ. ‘ನಾನು ಪಾರ್ಟಿಯಲ್ಲಿಲ್ಲ, ಮನೆಯಲ್ಲಿದ್ದೇನೆ’ ಎಂದು ಸಹ ಹೇಮಾ ಹೇಳಿಲ್ಲ. ಹಾಗಾಗಿ ಇದು ಹಳೆಯ ವಿಡಿಯೋ ಎನ್ನಲಾಗುತ್ತಿದೆ. ಆದರೆ ಇದಕ್ಕೆ ಮುನ್ನ ಬಿಡುಗಡೆ ಮಾಡಿದ್ದ ವಿಡಿಯೋನಲ್ಲಿ ತಾವು ಬೆಂಗಳೂರಿನಲ್ಲಿಲ್ಲ, ಹೈದರಾಬಾದ್ನಲ್ಲಿರುವುದಾಗಿ ಹೇಮಾ ಹೇಳಿದ್ದರು.
ಹೇಮಾ ಸಹ ಜಿಆರ್ ಫಾರ್ಮ್ಸ್ ನಲ್ಲಿ ನಡೆದ ಪಾರ್ಟಿಯಲ್ಲಿ ಹಾಜರಿದ್ದರು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಸ್ಪಷ್ಟಪಡಿಸಿದ್ದಾರೆ. ಹೇಮಾ, ನಿನ್ನೆ ಬಿಡುಗಡೆ ಮಾಡಿದ್ದ ವಿಡಿಯೋವನ್ನು ಪಾರ್ಟಿ ನಡೆದ ಜಿಆರ್ ಫಾರ್ಮ್ಸ್ ನಲ್ಲಿಯೇ ಮೊಬೈಲ್ನಲ್ಲಿ ಶೂಟ್ ಮಾಡಿ ಬಿಡುಗಡೆ ಮಾಡಿದ್ದರು ಎನ್ನಲಾಗುತ್ತಿದೆ. ಯಾವ ಸಮಯದಲ್ಲಿ ಅವರು ಹೀಗೆ ವಿಡಿಯೋ ಮಾಡಿ ಬಿಡುಗಡೆ ಮಾಡಿದ್ದಾರೆಂದು ತನಿಖೆ ನಡೆಸಲಿದ್ದೇವೆ ಎಂದು ದಯಾನಂದ್ ಹೇಳಿದ್ದಾರೆ.
ತೆಲುಗು ನಟ ಶ್ರೀಕಾಂತ್ ಸಹ ಈ ಪಾರ್ಟಿಯಲ್ಲಿದ್ದರು ಎಂಬ ಸುದ್ದಿ ಹರಿದಾಡಿತ್ತು. ಆದರೆ ಶ್ರೀಕಾಂತ್ ತಮ್ಮದೇ ಮನೆಯಿಂದ ವಿಡಿಯೋ ಮಾಡಿ, ತಾವು ಮನೆಯಲ್ಲಿಯೇ ಇರುವುದಾಗಿ ಹೇಳಿದ್ದು, ತಮಗೆ ಇಂಥಹಾ ಪಾರ್ಟಿಗಳಿಗೆ ಹೋಗುವ ಅಭ್ಯಾಸವಿಲ್ಲ, ನನ್ನದು ಅಂಥಹಾ ಸಂಸ್ಕೃತಿಯಲ್ಲ ಎಂದು ವಿಡಿಯೋದಲ್ಲಿ ತಿಳಿಸಿದ್ದರು.