ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಕುರಿತಾದ ಸಿನಿಮಾ ಕನ್ನಡದಲ್ಲೂ ತಯಾರಾಗುತ್ತಿದೆ. ಈ ಸಿನಿಮಾದ ಪ್ರಮುಖ ಪಾತ್ರಕ್ಕಾಗಿ ಬಾಲಿವುಡ್ ನಟ ಅನುಪಮ್ ಖೇರ್ ಅವರನ್ನು ಕರೆತರುವ ಪ್ರಯತ್ನ ನಡೆದಿದ್ದು, ಇದರ ಮಾತುಕತೆ ಹಿನ್ನೆಲೆಯಲ್ಲಿ ನಿರ್ದೇಶಕ ರಾಧಾಕೃಷ್ಣ ಪಲ್ಲಕ್ಕಿ ಈಗಾಗಲೇ ಮುಂಬೈಗೆ ತೆರಳಿದ್ದಾರೆ. ಅಂದುಕೊಂಡಂತೆ ಆದರೆ ಇನ್ನೆರಡು ದಿನದಲ್ಲಿ ಅನುಪಮ್ ಕನ್ನಡಕ್ಕೆ ಬರುವ ವಿಚಾರ ಗೊತ್ತಾಗಲಿದೆ.
ಹಿಂದಿಯಲ್ಲಿ ಈಗಾಗಲೇ ಸಾವರ್ಕರ್ ಬಯೋಪಿಕ್ ರೆಡಿ ಆಗುತ್ತಿದ್ದು, ಬಹುತೇಕ ಚಿತ್ರೀಕರಣ ಮುಗಿದಿದೆ. ಈ ಹೊತ್ತಿನಲ್ಲಿ ಸ್ಯಾಂಡಲ್ ವುಡ್ ಅವರ ಬಯೋಪಿಕ್ ಅನ್ನು ಕೈಗೆತ್ತಿಕೊಂಡಿದೆ. ಈ ಕುರಿತು ಚಿತ್ರದ ನಿರ್ದೇಶಕ ಪಲ್ಲಕ್ಕಿ ರಾಧಾಕೃಷ್ಣ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ವೀರ ಸಾವರ್ಕರ್ ಪಾತ್ರವನ್ನು ಸುನೀಲ್ ರಾವ್ ನಿರ್ವಹಿಸುತ್ತಿದ್ದು, ಮಹಾತ್ಮ ಗಾಂಧಿ ಪಾತ್ರವನ್ನು ಹಿಂದಿಯ ನಟ ಶರ್ಮಾ ಮಾಡುತ್ತಿದ್ದಾರೆ. ಚಿತ್ರದ ಟೀಸರ್ ಮತ್ತು ವೀರ ಸಾವರ್ಕರ್ ಪಾತ್ರವನ್ನು ನಿರ್ವಹಿಸುತ್ತಿರುವ ಸುನೀಲ್ ರಾವ್ ಅವರ ಫೋಟೋ ಶೂಟ್ ಕೂಡ ಮುಗಿದಿದೆ. ಮಾರ್ಚ್ 12 ರ ನಂತರ ಆ ಲುಕ್ ರಿಲೀಸ್ ಗೆ ಪ್ಲ್ಯಾನ್ ಮಾಡಲಾಗಿದೆ.
“ಹಿಂದಿಯಲ್ಲಿ ಈಗಾಗಲೇ ವೀರ ಸಾವರ್ಕರ್ ಅವರ ಬಯೋಪಿಕ್ ಚಾಲನೆ ಸಿಕ್ಕಿದೆ. ಆ ಸಿನಿಮಾಗೂ ನಮಗೂ ಸಂಬಂಧವಿಲ್ಲ. ಆ ತಂಡವೇ ಬೇರೆ ಇದೆ. ಕನ್ನಡದಲ್ಲಿ ಬರಲಿರುವ ತಂಡ ಮತ್ತು ಕಲಾವಿದರೇ ಬೇರೆ ಇದ್ದಾರೆ. ಚಿತ್ರೀಕರಣಕ್ಕೆ ಬೇಕಾದ ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ. ಮಾರ್ಚ್ 25 ರಿಂದ ಶೂಟಿಂಗ್ ಶುರು ಮಾಡುತ್ತೇವೆ. ಇದೊಂದು ಭಾರೀ ಬಜೆಟ್ ಸಿನಿಮಾ ಆಗಲಿರಲಿದೆ’ ಎಂದರು ರಾಧಾಕೃಷ್ಣ ಪಲ್ಲಕ್ಕಿ.
ಪಾತ್ರಕ್ಕೆ ಬೇಕಾಗಿರುವ ಎಲ್ಲ ತಯಾರಿಯನ್ನೂ ಸುನೀಲ್ ರಾವ್ ಕೂಡ ಮಾಡಿದ್ದಾರೆ. ಗೆಟಪ್ ಕೂಡ ಬದಲಾಯಿಸಿಕೊಂಡಿದ್ದಾರೆ. ಆದಷ್ಟು ನೈಜತೆಗೆ ಹತ್ತಿರವಾಗುವಂತೆ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಿದ್ದಾರಂತೆ ನಿರ್ದೇಶಕರು. ರಂಗಾಯಣ ರಘು, ಸಾಯಿಕುಮಾರ್, ರವಿಶಂಕರ್, ಅನುಪ್ರಭಾಕರ್ ಹೀಗೆ ಅನೇಕ ನುರಿತ ಕಲಾವಿದರು ಕೂಡ ತಾರಾಗಣದಲ್ಲಿ ಇರಲಿದ್ದಾರೆ. ಕೆ.ಎಸ್. ಚಂದ್ರಶೇಖರ್ ಅವರ ಸಿನಿಮಾಟೋಗ್ರಫಿ, ಥ್ರಿಲ್ಲರ್ ಮಂಜು ಅವರ ಸಾಹಸ ಮತ್ತು ಸ್ಯಾಮ್ ಸಂಗೀತ ಚಿತ್ರಕ್ಕಿರಲಿದೆ. ಕೆ.ಎನ್. ಚಕ್ರಪಾಣಿ ಈ ಸಿನಿಮಾದ ನಿರ್ಮಾಪಕರು.