ಅಹ್ಮದಾಬಾದ್ : ‘ಈತನ ಕಥೆ ಮುಗಿದೆ’ ಎಂದವರಿಗೆಲ್ಲಾ ವಿರಾಟ್ ಕೊಹ್ಲಿ ತಮ್ಮ ಬ್ಯಾಟ್ ಮೂಲಕ ಬಾಯಿ ಮುಚ್ಚಿಸಿದ್ದಾರೆ. ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿಯ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಅತ್ಯಂತ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ, ತಮ್ಮ ಟೆಸ್ಟ್ ಕೆರಿಯರ್ನ 28ನೇ ಶತಕ ದಕ್ಕಿಸಿಕೊಂಡರು. ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾ ವಾಲ್ ಮೇಲೆ ಬರೆದುಕೊಂಡಿರುವ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ, ಅನಾರೋಗ್ಯದ ನಡುವೆಯೂ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಪತಿಯನ್ನು ಗುಣಗಾನ ಮಾಡಿದ್ದಾರೆ.
“ಅನಾರೋಗ್ಯದ ನಡುವೆಯೂ ಇಂತಹ ಏಕಾಗ್ರತೆಯ ಆಟ ಸದಾ ಸ್ಪೂರ್ತಿ ನೀಡುವಂಥದ್ದು,” ಎಂದು ಅನುಷ್ಕಾ ಶರ್ಮಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ, ಟೆಸ್ಟ್ ಕ್ರಿಕೆಟ್ನಲ್ಲಿ ಬರೋಬ್ಬರಿ ಮೂಡು ವರ್ಷಗಳ ಬಳಿಕ ಶತಕ ದಕ್ಕಿಸಿಕೊಂಡರು. 2019ರ ನವೆಂಬರ್ನಲ್ಲಿ ಬಾಂಗ್ಲಾದೇಶ ಎದುರು ತಮ್ಮ ಕೊನೇ ಶತಕ ಬಾರಿಸಿದ್ದ ಕೊಹ್ಲಿ, ಬರೋಬ್ಬರಿ 1204 ದಿನಗಳ ಬಳಿಕ ರೆಡ್ ಬಾಲ್ ಕ್ರಿಕೆಟ್ನಲ್ಲಿ ಮೂರಂಕಿಯ ಸ್ಕೋರ್ ದಕ್ಕಿಸಿಕೊಂಡರು.
ಇನ್ನು ವಿರಾಟ್ ಜೊತೆಗೂಡಿ 6ನೇ ವಿಕೆಟ್ಗೆ 162 ರನ್ಗಳ ಅಮೋಘ ಜೊತೆಯಾಟವಾಡಿದ ಅಕ್ಷರ್ ಪಟೇಲ್ (79) ಭಾರತ ತಂಡಕ್ಕೆ ಮುನ್ನಡೆ ಒದಗಿಸುವಲ್ಲಿ ಬಹುಮುಖ್ಯ ಪಾತ್ರವಹಿಸಿದರು. ತಮ್ಮ ಈ ಜೊತೆಯಾಟದ ಬಗ್ಗೆ ಮಾತನಾಡಿದ ಅಕ್ಷರ್ ಪಟೇಲ್, “ವಿರಾಟ್ ಕೊಹ್ಲಿ ರನ್ನಿಂಗ್ ಬಿಟ್ವೀನ್ ವಿಕೆಟ್ ಕಂಡಾಗ ಅವರು ಅನಾರೋಗ್ಯದಿಂದ ಬಳಲಿದ್ದಾರೆ ಎಂದು ನಂಬಲು ಸಾಧ್ಯವಾಗಲಿಲ್ಲ,” ಎಂದು ಗುಣಗಾನ ಮಾಡಿದ್ದರು.