ಟಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ಮಟ್ಟಿಗೆ ಸದ್ದು ಮಾಡಿದ್ದ ನಟಿ ಅನುಷ್ಕಾ ಶೆಟ್ಟಿ ಬಾಹುಬಲಿ 2 ಸಿನಿಮಾದ ಬಳಿಕ ಕೊಂಚ ಮಟ್ಟಿಗೆ ಸೈಲೆಂಟ್ ಆಗಿದ್ದಾರೆ. ಆಗೊಂದು ಈಗೊಂದು ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಿರುವ ನಟಿ ಇದೀಗ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ.
ಮಹಿಳಾ ಪ್ರಧಾನ ಸಿನಿಮಾ, ಸಣ್ಣ ಬಜೆಟ್ನ ಸಿನಿಮಾಗಳಿಗೆ ಮಾತ್ರವೇ ತಮ್ಮನ್ನು ಸೀಮಿತಗೊಳಿಸಿಕೊಂಡಿರುವ ಅನುಷ್ಕಾ ಶೆಟ್ಟಿ ಇದೇ ಮೊದಲ ಭಾರಿಗೆ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಮೋಡಿ ಮಾಡಿದ್ದ ನಟಿ ಇದೀಗ ಮಲಯಾಳಂ ಚಿತ್ರರಂಗದಲ್ಲು ಸದ್ದು ಮಾಡಲು ರೆಡಿಯಾಗಿದ್ದಾರೆ.
ಮಲಯಾಳಂ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರಾದ ರೋಜಿನ್ ಥಾಮಸ್ ನಿರ್ದೇಶನ ಮಾಡುತ್ತಿರುವ ಹಾರರ್ ಸಿನಿಮಾನಲ್ಲಿ ಅನುಷ್ಕಾ ಶೆಟ್ಟಿ ನಟಿಸಲಿದ್ದಾರೆ. ಸಿನಿಮಾಕ್ಕೆ ‘ಕತನಾರ್; ದಿ ವೈಲ್ಡ್ ಸಾರ್ಸರರ್’ ಎಂದು ಹೆಸರಿಡಲಾಗಿದ್ದು, ಸಿನಿಮಾದಲ್ಲಿ ’ಕಲಿಯಂಕಟ್ಟು ನೀಲಿ’ ಎಂಬ ಕೇರಳದ ಜನಪದ ಕತೆಗಳಲ್ಲಿ ಬರುವ ಯಕ್ಷಿಣಿ ಅಥವಾ ಆತ್ಮದ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ ನಟಿಸುತ್ತಿದ್ದಾರೆ. ನಿರ್ದೇಶಕ ರೋಜಿನ್ ಈ ಹಿಂದೆ ‘ಹೋಮ್’ ಹೆಸರಿನ ಸುಂದರ ಮಲಯಾಳಂ ಸಿನಿಮಾ ನಿರ್ದೇಶನ ಮಾಡಿದ್ದರು.
ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ‘ಕತನಾರ್; ದಿ ವೈಲ್ಡ್ ಸಾರ್ಸರರ್’ ಸಿನಿಮಾವು ಒಬ್ಬ ಮಾಂತ್ರಿಕ ಹಾಗೂ ದೆವ್ವದ ನಡುವೆ ನಡೆವ ಕತೆಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ. ಹಾರರ್ ಸಿನಿಮಾ ಆಗಿದ್ದರೂ ಸಹ ಭರ್ಜರಿಯಾದ ಆಕ್ಷನ್ ಹಾಗೂ ಸಸ್ಪೆನ್ಸ್ ಈ ಸಿನಿಮಾದಲ್ಲಿದೆ ಎನ್ನಲಾಗುತ್ತಿದೆ. ಸಿನಿಮಾದ ಕತೆ ಹಾಗೂ ತಮ್ಮ ಪಾತ್ರಕ್ಕೆ ಇರುವ ಪ್ರಾಧಾನ್ಯತೆಯನ್ನು ಮೆಚ್ಚಿ, ಅನುಷ್ಕಾ ಶೆಟ್ಟಿ ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.